ಹ್ಯಾಂಗ್ಝೋ: ಏಷ್ಯನ್ ಕ್ರೀಡಾಕೂಟದ ಕ್ರಿಕೆಟ್ (Asian Games Cricket) ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಭಾರತ (Team India) ಫೈನಲ್ ಪ್ರವೇಶಿಸಿದೆ. ಟಾಸ್ ಸೋತು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ 9.1 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 97 ರನ್ ಗಳಿಸಿತು.
ನೇಪಾಳ ವಿರುದ್ಧ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಈ ಬಾರಿ ಮೊದಲ ಓವರ್ನಲ್ಲಿ ಶೂನ್ಯಕ್ಕೆ ಔಟಾದರು. ನಂತರ ಮುರಿಯದ ಎರಡನೇ ವಿಕೆಟಿಗೆ ನಾಯಕ ಋತುರಾಜ್ ಗಾಯಕ್ವಾಡ್ (Ruturaj Gaikwad) ಮತ್ತು ತಿಲಕ್ ವರ್ಮಾ (Tilak Varma) 52 ಎಸೆತಗಳಲ್ಲಿ 97 ರನ್ ಜೊತೆಯಾಟವಾಡಿ ಜಯ ತಂದುಕೊಟ್ಟರು. ಗಾಯಕ್ವಾಡ್ 40 ರನ್ (26 ಎಸೆತ, 4 ಬೌಂಡರಿ, 3 ಸಿಕ್ಸರ್), ತಿಲಕ್ ವರ್ಮಾ 55 ರನ್(26 ಎಸೆತ, 2 ಬೌಂಡರಿ, 6 ಸಿಕ್ಸರ್) ಹೊಡೆದರು.
ಬಾಂಗ್ಲಾ ಪರ ಪರ್ವೇಜ್ ಹೊಸೈನ್ ಎಮಾನ್ 23 ರನ್, ಜೇಕರ್ ಅಲಿ ಔಟಾಗದೇ 24 ರನ್ ಹೊಡೆದರು. ಭಾರತದ ಪರ ಸಾಯಿ ಕಿಶೋರ್ 3 ವಿಕೆಟ್, ವಾಷಿಂಗ್ಟನ್ ಸುಂದರ್ 2 ವಿಕೆಟ್ ಕಿತ್ತರೆ, ಅರ್ಶ್ದೀಪ್ ಸಿಂಗ್ ತಿಲಕ್ ವರ್ಮಾ , ರವಿ ಬಿಶ್ಣೋಯಿ, ಶಹಬಾಜ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದರು.ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮಧ್ಯೆ ಇಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಭಾನುವಾರ ಫೈನಲ್ ನಡೆಯಲಿದೆ.