ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ 2ನೇ ಪಂದ್ಯದಲ್ಲೂ ಟೀಮ್ ಇಂಡಿಯಾ ಮುಗ್ಗರಿಸಿದೆ. ಪಂದ್ಯದಲ್ಲಿ ಗೆಲುವಿಗೆ 153 ರನ್‌ಗಳ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ತಂಡ ಆರಂಭಿಕ ಆಘಾತ ಮತ್ತು ಡೆತ್ ಓವರ್‌ಗಳಲ್ಲಿನ ಪರದಾಟದ ನಡುವೆಯೂ 2 ವಿಕೆಟ್‌ಗಳ ರೋಚಕ ಜಯ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್, 40 ಎಸೆತಗಳಲ್ಲಿ 67 ರನ್ ಸಿಡಿಸುವ ಮೂಲಕ ವಿಂಡೀಸ್ ವಿಜಯದ ರೂವಾರಿಯಾದರು. ಸರಣಿಯಲ್ಲಿ ವೆಸ್ಟ್ ಇಂಡೀಸ್ 2-0 ಅಂತರದ ಭರ್ಜರಿ ಮುನ್ನಡೆ ಪಡೆದುಕೊಂಡಿದೆ. ಭಾರತದ ಪರ ನಾಯಕ ಹಾರ್ದಿಕ್ ಪಾಂಡ್ಯ (35ಕ್ಕೆ 3) ಮೂರು ವಿಕೆಟ್ ಉರುಳಿಸಿದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.
ಆರಂಭಿಕ ಆಘಾತ ಅನುಭವಿದ್ದ ಟೀಮ್ ಇಂಡಿಯಾಗೆ ಆಸರೆಯಾದ ಯುವ ಬ್ಯಾಟರ್ ತಿಲಕ್ ವರ್ಮಾ, ಚೊಚ್ಚಲ ಅರ್ಧಶತಕ ಬಾರಿಸುವ ಮೂಲಕ ಮಿಂಚಿದರು. ಆದರೂ ವೆಸ್ಟ್ ಇಂಡೀಸ್ ತಂಡದ ಶಿಸ್ತಿನ ಬೌಲಿಂಗ್ ದಾಳಿ ಎದುರು ಭಾರತ ತಂಡ 20 ಓವರ್‌ಗಳಲ್ಲಿ 152/7 ರನ್‌ಗಳ ಸಾದಾರಣ ಮೊತ್ತ ಕಲೆಹಾಕಲಷ್ಟೇ ಶಕ್ತವಾಯಿತು. ಇನಿಂಗ್ಸ್ ಮಧ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ (24) ಮತ್ತು ಓಪನರ್ ಇಶಾನ್ ಕಿಶನ್ (27) ಮಹತ್ವದ ಕೊಡುಗೆ ಕೊಟ್ಟರು. ವೆಸ್ಟ್ ಇಂಡೀಸ್ ಪರ ಅಲ್ಝಾರಿ ಜೋಸೆಫ್, ಅಕೆಲ್ ಹೊಸೇನ್ ಮತ್ತು ರೊಮಾರಿಯೋ ಶೆಫರ್ಡ್ ತಲಾ 2 ವಿಕೆಟ್ ಪಡೆದರು.