ತಮಿಳುನಾಡು:- ತಮಿಳುನಾಡಿನ ಹಲವಾರು ಪ್ರದೇಶಗಳು ನಿರಂತರ ಮಳೆಗೆ ತತ್ತರಿಸಿ ಹೋಗಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ 12,000 ಕೋಟಿ ರೂ. ಕೇಂದ್ರದ ನೆರವು ಮತ್ತು 7,300 ಕೋಟಿ ರೂ. ತಕ್ಷಣದ ಪರಿಹಾರ ಹಣವನ್ನು ಕೋರಿದ್ದಾರೆ. ಈ ಕುರಿತಂತೆ ಮಂಗಳವಾರ ಸಂಜೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ.
ತಕ್ಷಣದ ಪರಿಹಾರಕ್ಕಾಗಿ 7,300 ಕೋಟಿ ಮತ್ತು ಶಾಶ್ವತ ಪರಿಹಾರ ಎಂದು 12,000 ಕೋಟಿ ರೂ. ಹಣ ಕೇಳಿದ್ದೇನೆ. ಈಗಾಗಲೇ ಪ್ರವಾಹದಿಂದ ತೊಂದರೆ ಅನುಭವಿಸಿದ ಸಂತ್ರಸ್ತರಿಗೆ 6000 ರೂಪಾಯಿ ಪರಿಹಾರ ಘೋಷಿಸಿದ್ದೇವೆ. ಅದನ್ನು ವಿತರಿಸಲಾಗುತ್ತಿದೆ. ನಾವು ಪ್ರಧಾನಿ ಅವರಿಂದ ಪರಿಹಾರ ನಿಧಿಯನ್ನು ಪಡೆದಾಗ ಮಾತ್ರ ಪರಿಹಾರ ಕಾರ್ಯವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಸಾಧ್ಯ’ ಎಂದು ಸ್ಟಾಲಿನ್ ಹೇಳಿದರು.
ಪ್ರಧಾನಿಯನ್ನು ಭೇಟಿಯಾಗುವ ಮುನ್ನ ಮಾತನಾಡಿದ ಸಿಎಂ, ‘ತಕ್ಷಣದ ಪರಿಹಾರವಾಗಿ, ನಾನು ರಾಷ್ಟ್ರೀಯ ವಿಪತ್ತು ನಿಧಿಯಿಂದ ಹಣವನ್ನು ಕೇಳುತ್ತೇನೆ. ತಮಿಳುನಾಡು ನಿರಂತರವಾಗಿ ಎರಡು ವಿಪತ್ತುಗಳನ್ನು ಎದುರಿಸುತ್ತಿದ್ದು, ಶೀಘ್ರವೇ ಹಣ ಬಿಡುಗಡೆ ಮಾಡುವಂತೆ ನಾನು ಪ್ರಧಾನಿಯವರನ್ನು ಒತ್ತಾಯಿಸುತ್ತೇನೆ’ ಎಂದು ಹೇಳಿದ್ದರು.