ಬೆಂಗಳೂರು : ಮೂರು ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕು ಎಂಬ ಅಭಿಪ್ರಾಯಕ್ಕೆ ನಾನು ಬದ್ಧನಾಗಿದ್ದೇನೆ. ಈ ನಿಟ್ಟಿನಲ್ಲಿ ಯಾವುದೇ ಚಾಲೆಂಜ್ ಎದುರಿಸಲು ನಾನು ಸಿದ್ದನಿದ್ದೇನೆ ಎಂದು ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.
ನಗರದ ಕೆಕೆ ಗೆಸ್ಟ್ ಹೌಸ್ ನಲ್ಲಿ ಮಾತನಾಡಿದ ಅವರು, ಸಮುದಾಯವಾರು ಮೂರು ಡಿಸಿಎಂ ಆಗಬೇಕು ಅನ್ನುವ ವಿಚಾರದಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು. ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡಿದ್ದೇನೆ. ಅವರಿಗೆ ಸರಿ ಅನ್ನಿಸಿದರೆ ಮಾಡ್ತಾರೆ. ಬೇಡ ಅಂದರೆ ಬಿಡುತ್ತಾರೆ ಎಂದು ಹೇಳಿದರು.
ಮೂರು ಡಿಸಿಎಂ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಈ ಮಾತನ್ನು ನನ್ನಿಂದ ಹೇಳಿಸ್ತಾ ಇದ್ದಾರೆ ಅನ್ನೋದು ತಪ್ಪು. ನಾನು ಈ ವಿಚಾರವಾಗಿ ಸಿದ್ದರಾಮಯ್ಯರನ್ನು ಭೇಟಿ ಮಾಡೇ ಇಲ್ಲ. ಈ ರೀತಿಯಲ್ಲಿ ಹೆಚ್ಚು ಡಿಸಿಎಂ ಹುದ್ದೆ ಸೃಷ್ಟಿ ಮಾಡಿದ್ರೆ ಡಿಸಿಎಂ ಡಿಕೆ ಶಿವಕುಮಾರ್ ಪ್ರಾಮುಖ್ಯತೆ ಕಡಿಮೆ ಮಾಡಲಾಗುತ್ತದೆ ಅನ್ನೋದೂ ತಪ್ಪು ಎಂದರು.