ಮಲೆನಾಡಿನಲ್ಲಿ ಅಡಿಕೆ ಮರ ಹಲವು ರೋಗಗಳಿಗೆ ಸುಲಭವಾಗಿ ತುತ್ತಾಗುತ್ತಿದ್ದು, ನಿಯಂತ್ರಣ ಅಸಾಧ್ಯ ಎನ್ನುವಂತಹ ಸನ್ನಿವೇಶ ಶಿವಮೊಗ್ಗ ಜಿಲ್ಲೆಯ ತಾಲೂಕುಗಳಲ್ಲಿ ಉದ್ಭವಿಸಿದೆ. ಇದರ ನಡುವೆ ತೋಟದಲ್ಲಿ ಮತ್ತೊಂದು ರೋಗ ಕಂಡುಬಂದಿದ್ದು, ರೈತರನ್ನು ತೀವ್ರ ಚಿಂತೆಗೆ ದೂಡಿದೆ.ಆಗುಂಬೆ ಹೋಬಳಿ ಭಾಗದ ವಿವಿಧ ಕಡೆ ಹಸಿರು ತುಂಬಿದ ಅಡಿಕೆ ಮರ ಜೀವ ಕಳೆದುಕೊಳ್ಳುತ್ತಿವೆ. ಹಚ್ಚ ಹಸುರಿನ ಅಡಿಕೆ ಮರದ ಸುಳಿ ಒಣಗಿ ಹಸಿ ಹೆಡಲು ಸಂಪೂರ್ಣ ಬಾಗಿ ಮರ ಸಾಯುತ್ತಿರುವುದಕ್ಕೆ ಕಾರಣ ರೈತರಿಗೆ ತಿಳಿಯುತ್ತಿಲ್ಲ. ರೋಗ ಹೊಸದಾಗಿ ಕಂಡಿದೆ ಎಂಬ ಅಭಿಪ್ರಾಯ, ಆತಂಕ ರೈತರದ್ದು. ಸಾಯುತ್ತಿರುವ ಮರಗಳ ಸುಳಿ ಮತ್ತು ಹೆಡಲಿನಲ್ಲಿದೊಡ್ಡ ಗಾತ್ರದ ರಾಶಿ ಗಟ್ಟಲೆ ಹುಳುಗಳು ಕಂಡು ಬಂದಿವೆ. ಮುಂಗಾರು ಅವಧಿಯಲ್ಲಿಈ ರೀತಿಯ ರೋಗ ಕಂಡಿರಲಿಲ್ಲ. ಕೇವಲ ಹತ್ತಿಪ್ಪತ್ತು ದಿನಗಳಿಂದ ರೋಗ ಲಕ್ಷಣ ಕಂಡು ಬಂದಿದ್ದು ರೈತರಿಗೆ ದಿಕ್ಕೇ ಕಾಣದಂತಾಗಿದೆ.
ಮಾರುಕಟ್ಟೆಯಲ್ಲಿ ಅಡಿಕೆ ಬೆಳೆಗೆ ಧಾರಣೆ ಹೆಚ್ಚಾಗುತ್ತಿದ್ದಂತೆ ಬೇಸಾಯ, ನಿರ್ವಹಣೆಯಲ್ಲಿ ನಿರೀಕ್ಷೆಗೂ ಮೀರಿದ ರೀತಿಯ ಬದಲಾವಣೆ ಆಗಿದೆ. ಸಾಂಪ್ರದಾಯಿಕ ಪದ್ಧತಿಯ ಕೃಷಿ ಬದಲಾಗಿ ರಾಸಾಯಿನಿಕ ಗೊಬ್ಬರ, ಔಷಧ ಬಳಕೆ ಹೆಚ್ಚಿದೆ. ಇತ್ತೀಚಿನ ವರ್ಷಗಳಲ್ಲಿಅಡಿಕೆ ಗೆ ಅತ್ಯಧಿಕ ಪ್ರಮಾಣದಲ್ಲಿ ಮಾರಣಾಂತಿಕ ರೋಗಗಳು ಕಂಡುಬರುತ್ತಿವೆ. ನಿಯಂತ್ರಣಕ್ಕಾಗಿ ಸೂಕ್ತ ಸಲಹೆ ಇಲ್ಲದಿದ್ದರೂ ರಾಸಾಯಿನಿಕ ಔಷಧಗಳನ್ನು ಮಾರಾಟಗಾರ ಕಂಪನಿಗಳ ಪ್ರಚಾರವನ್ನು ನಂಬಿ ಬಳಸಲಾಗುತ್ತಿದೆ. ಅಡಿಕೆ ಬೆಳೆಯಲ್ಲಿ ಕಂಡುಬರುತ್ತಿರುವ ಹೊಸ ರೋಗಗಳಿಗೆ ಮದ್ದು ಇಲ್ಲದಂತಹ ಕಠಿಣ ಪರಿಸ್ಥಿತಿ ಎದುರಾಗಿದ್ದು ರೈತರಿಗೆ ಸವಾಲಾಗಿದೆ.