ಮಲೆನಾಡಿನಲ್ಲಿ ಕೆಂಪಕ್ಕಿ, ವಾಳ್ಯಾ ಅಭಿಲಾಷ ಮುಂತಾದ ವಿಧದಲ್ಲಿ ಲಭಿಸುವ ಈ ಭತ್ತದ ರುಚಿ ಇತ್ತೀಚಿನ ದಿನಗಳಲ್ಲಿಅಮೆರಿಕ, ಜರ್ಮನಿಯವರ ನಾಲಿಗೆಗೂ ತಲುಪಿಯಾಗಿದೆ. ವಿದೇಶದಲ್ಲಿರುವ ಮಲೆನಾಡಿಗರು ಸೇರಿದಂತೆ ಅಲ್ಲಿಯವರೂ ಈ ಕೆಂಪಕ್ಕಿಯ ರುಚಿಗೆ ಮಾರುಹೋಗಿದ್ದಾರೆ. ಹೀಗಾಗಿ, ಬೇಡಿಕೆಗೆ ತಕ್ಕಷ್ಟು ಅಕ್ಕಿಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.
ಕೆಂಪಕ್ಕಿಗೆ ಉಳಿದ ಭತ್ತದ ಹೋಲಿಕೆಯಲ್ಲಿ ಕಡಿಮೆ ಗೊಬ್ಬರ ಬಳಸಲಾಗುತ್ತದೆ. ಹೀಗಾಗಿ, ಇತ್ತೀಚಿನ ಸಾವಯವ ಜಗತ್ತಿನ ಪೈಪೋಟಿಯಲ್ಲಿ ಮಲೆನಾಡಿನ ಅಕ್ಕಿಯೂ ಸ್ಥಳ ಪಡೆದುಕೊಂಡಿದೆ. ಹೀಗಾಗಿ, ಬೆಂಗಳೂರು, ಕರಾವಳಿ ಸೇರಿದಂತೆ ಚಂಡೀಗಢಕ್ಕೂ ಅಕ್ಕಿ ಸರಬರಾಜು ಮಾಡಲಾಗುತ್ತಿದೆ
ಇಷ್ಟೊತ್ತಿಗಾಗಲೇ ಮಾರುಕಟ್ಟೆಗೆ ಹೊಸ ಕೆಂಪಕ್ಕಿ ಲಗ್ಗೆ ಇಡಬೇಕಿತ್ತು. ಕಟಾವು ವಿಳಂಬವಾಗಿದ್ದರಿಂದ ಹೊಸ ಅಕ್ಕಿ ಮಾರುಕಟ್ಟೆ ಪ್ರವೇಶಿಸಿಲ್ಲ. ಜನವರಿ ಹೊತ್ತಿಗೆ ಅಕ್ಕಿ ಲಭ್ಯವಾಗುವ ನಿರೀಕ್ಷೆ ಇದೆ. ಆದರೆ, ಮಲೆನಾಡಿನಲ್ಲಿಮಳೆ ಕೊರತೆಯಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದ್ದು, ಅಕ್ಕಿಯ ಬೆಲೆ ಸ್ಥಿರವಾಗಿರಲಿದೆ ಎನ್ನುತ್ತಾರೆ ಮಾರಾಟಗಾರರು.
ಕೆಂಪಕ್ಕಿ ಸ್ಥಳೀಯ ಪ್ರಭೇದವಾಗಿದ್ದು, ಸಿದ್ದಾಪುರ, ಸೊರಬ, ತಾಳಗುಪ್ಪ, ತೀರ್ಥಹಳ್ಳಿ, ಸಾಗರ ಸೇರಿದಂತೆ ಚಿಕ್ಕಮಗಳೂರಿನ ಕೆಲವೆಡೆ ಬೆಳಸಲಾಗುತ್ತದೆ. ಪ್ರಧಾನವಾಗಿ ಡಯೆಟರಿ ಫೈಬರ್(ನಾರಿನಂಶ), ಗುಣಮಟ್ಟ, ಪೌಷ್ಟಿಕಾಂಶಯುಕ್ತ ಆಹಾರ ಎಂಬ ಕಾರಣಕ್ಕೆ ಸ್ಥಳೀಯವಾಗಿಯೇ ಬಳಸುತ್ತಿದ್ದ ಅಕ್ಕಿಗೀಗ ಹೊರ ರಾಜ್ಯ ಮತ್ತು ದೇಶಗಳಲ್ಲೂಬೇಡಿಕೆ ಸೃಷ್ಟಿಯಾಗಿದೆ. ಕಳೆದ ವರ್ಷ ಶೇ.20ರಷ್ಟು ಕೆಂಪಕ್ಕಿಯನ್ನು ಕರಾವಳಿಯಿಂದಲೇ ಖರೀದಿಸಲಾಗಿತ್ತು. ಈ ಮುಂಚೆ ಹೇರಳವಾಗಿ ಬೆಳೆಯುತ್ತಿದ್ದ ಭತ್ತದ ಪ್ರದೇಶವನ್ನು ಅಡಕೆ ಆಕ್ರಮಿಸಿಕೊಂಡಿದೆ. ಇದೂ ಮಾರುಕಟ್ಟೆಗೆ ಕೆಂಪಕ್ಕಿ ಆವಕ ಕಡಿಮೆ ಆಗಲು ಕಾರಣವಾಗಿದೆ.