ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ಧರಾಮಯ್ಯ ಅವರು, ಡಿಸಿಎಂ ಡಿಕೆ ಶಿವಕುಮಾರ್, 8 ಮಂದಿ ಸಚಿವರೊಂದಿಗೆ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸಿದರು. ಈ ಬಳಿಕ ಪ್ರಣಾಣಿಕೆಯಲ್ಲಿ ಘೋಷಿಸಿದಂತ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಆದೇಶವನ್ನು ಹೊರಡಿಸಲಾಗುತ್ತದೆ ಎಂಬುದಾಗಿ ಘೋಷಿಸಿದರು.
ವಿಧಾನಸೌಧದದ ಸಂಪುಟ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ, ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನಾವು ಇವತ್ತು ನಾನು, ಡಿಕೆ ಶಿವಕುಮಾರ್ ಹಾಗೂ 8 ಜನ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದೇವೆ. ಇಂದಿನ ಸಭೆಯಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. ಎಐಸಿಸಿ ಅಧ್ಯಕ್ಷರಾದಂತ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕರು ಆಗಮಿಸಿದ್ದರು. ಅವರೆಲ್ಲರೂ ಹೊಸ ಸರ್ಕಾರಕ್ಕೆ ಶುಭ ಕೋರಿದ್ದಾರೆ. ನಾವು ಕೂಡ ನಾಡಿನ ಜನತೆಗೆ, ಬಂದಿದ್ದಂತ ಎಲ್ಲಾ ಅಥಿತಿಗಳಿಗೆ ಸ್ವಾಗತ ಮಾಡಿ, ಧನ್ಯವಾದಗಳನ್ನು ಅರ್ಪಿಸಿದ್ದೇವೆ ಎಂದರು.