ಬೆಂಗಳೂರು : ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಗಾಂಜಾಗಾಗಿ ಜೈಲು ಸಿಬ್ಬಂದಿ ಹಾಗೂ ವಿಚಾರಣಾಧೀನ ಖೈದಿ ಮಧ್ಯೆ ಗಲಾಟೆ ನಡೆದಿರುವ ವಿಚಾರ ಸಂಬಂಧ ಬಿಜೆಪಿ ಪ್ರತಿಕ್ರಿಯಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕಲ್ಬುರ್ಗಿಯನ್ನು ರಿಪಬ್ಲಿಕ್ ಅನ್ನಾಗಿಸಿಕೊಂಡಿರುವ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರ ಉಸ್ತುವಾರಿಯಲ್ಲಿ ಬರೀ ಅಕ್ರಮಗಳದ್ದೇ ಸದ್ದು ಎಂದು ಲೇವಡಿ ಮಾಡಿದೆ.
ಜೈಲಿನಲ್ಲಿರುವ ವಿಚಾರಣಾಧೀನ ಖೈದಿ ಹಾಗೂ ಜೈಲು ಸಿಬ್ಬಂದಿಗಳ ನಡುವೆ ಗಾಂಜಾಗಾಗಿ ಹೊಡೆದಾಟ ನಡೆದಿದೆ. ಕರ್ನಾಟಕದ ಉಳಿದೆಡೆ ಜೈಲು ಶಿಕ್ಷೆ ಅನುಭವಿಸುವ ತಾಣವಾದರೆ, ಕಲ್ಬುರ್ಗಿಯಲ್ಲಿ ಮಾತ್ರ ಜೈಲು ಮಜಾ ಮಾಡುವ, ವ್ಯಸನ ಮಾಡುವ ತಾಣವಾಗಿದೆ ಎಂದು ಚಾಟಿ ಬೀಸಿದೆ.
ಸಚಿವ ಪ್ರಿಯಾಂಕ್ ಖರ್ಗೆಯವರ ಕೃಪಾಕಟಾಕ್ಷದಿಂದ ಕಲ್ಬುರ್ಗಿಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದೆ. ಮಾತ್ರವಲ್ಲದೆ ಜೈಲುಗಳು ಸಹ ಅಕ್ರಮದ ತಾಣಗಳಾಗುತ್ತಿರುವುದು ನಿಜಕ್ಕೂ ದುರಂತ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದೆ.