ಹುಕ್ಕಾ ಬಾರ್ ಹೆಸರಿನಲ್ಲಿ ಗಾಂಜಾ ಮಾರಾಟ, ತಕ್ಷಣವೇ ರಾಜ್ಯದಲ್ಲಿನ ಹುಕ್ಕಾ ಬಾರ್‌ಗಳನ್ನು ಮುಚ್ಚಿಸಿ: ಆಮ್ ಆದ್ಮಿ ಪಕ್ಷ ಆಗ್ರಹ

ಬೆಂಗಳೂರು: ನಗರದಲ್ಲಿ ಹುಕ್ಕಾ ಬಾರ್ ಹೆಸರಿನಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ. ಹದಿ ಹರೆಯದ ಯುವಕರಿಂದ ವಯಸ್ಸಾದವರೂ ಕೂಡ ಈ ಚಟಕ್ಕೆ ಬಲಿಯಾಗುತ್ತಿದ್ದು, ತಕ್ಷಣವೇ ಹುಕ್ಕಾ ಬಾರ್‌ಗಳನ್ನು ನಿಲ್ಲಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ವಕೀಲರಾದ ಲೋಹಿತ್ ಒತ್ತಾಯಿಸಿದರು.

ನಗರದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಇರುವ ಹುಕ್ಕಾಬಾರ್‌ಗಳನ್ನು ನಿಲ್ಲಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ ಒಂದು ತಿಂಗಳ ನಂತರ, ನಗರದ ಹುಕ್ಕಾಬಾರ್‌ವೊಂದರಲ್ಲಿ ಬೆಂಕಿ ದುರಂತ ಸಂಭವಿಸಿದೆ, ಸಚಿವರು ಬರಿ ಹೇಳಿಕೆ ನೀಡುತ್ತಿದ್ದಾರೆ, ಆದರೆ ಇವು ಆದೇಶಗಳಾಗಿ ಬದಲಾಗುತ್ತಿಲ್ಲ ಎಂದರು.

ಗಾಂಜಾ ವಿಚಾರದಲ್ಲಿ ರಾಜ್ಯದಲ್ಲಿ ಪ್ರತಿ ದಿನ 100 ರಿಂದ 150 ಪ್ರಕರಣ ದಾಖಲಾಗುತ್ತಿವೆ. ಈ ಗಾಂಜಾ ಸೇವನೆಗೆ ಹುಕ್ಕಾ ಬಾರ್ ಸುರಕ್ಷಿತ ತಾಣಗಳಾಗಿವೆ. ಗಾಂಜಾ ಮಿಶ್ರಣ ಮಾಡಿ ಹುಕ್ಕಾ ಸೇವನೆ ಮಾಡಲಾಗುತ್ತಿದೆ. ಮಧ್ಯರಾತ್ರಿ 2-3 ಗಂಟೆವರೆಗೂ ಇವು ತೆರೆದಿರುತ್ತವೆ, ಇದಕ್ಕೆ ಪೊಲೀಸರು ಕೂಡ ಕೈಜೋಡಿಸಿದ್ದಾರೆ. ಇಂದು ರಸ್ತೆಬದಿಗಳಲ್ಲಿ ಹುಕ್ಕಾ ಸೇದುವ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶ ಇದೆ. ಆದರೆ, ಇದು ಕಾನೂನಾಗಿ ಬದಲಾಗಬೇಕು ಎಂದು ಆಗ್ರಹಿಸಿದರು.

Loading

Leave a Reply

Your email address will not be published. Required fields are marked *