ಹುಬ್ಬಳ್ಳಿ: ರಾಜ್ಯ ಸರ್ಕಾರ ಪತನವಾಗುವ ಬಗ್ಗೆ ಹಾಗೂ 45 ಕಾಂಗ್ರೆಸ್ ಶಾಸಕರು ನಮ್ಮ ಬಳಿ ಇದ್ದಾರೆ ಎಂಬ ಯತ್ನಾಳ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸವಾಲು ಹಾಕಿದ್ದು ನಾಲ್ಕು ಜನರ ಹೆಸರು ಹೇಳಲಿ ಎಂದರು. ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಜಗದೀಶ್ ಶೆಟ್ಟರ್ ರಿಂದ ಬಿಜೆಪಿಗೆ ಏನು ಲಾಭ ಇಲ್ಲ ಎಂದ ಯತ್ನಾಳ್ ಮಾತಿಗೆ ಶೆಟ್ಟರ್ ತಿರುಗೇಟು ನೀಡಿ, ಕಳೆದ ವಿಧಾನ ಸಭಾ ಚುನಾವಣೆಯ ಫಲಿತಾಂಶ ಏನಾಗಿದೆ ಎಲ್ಲರಿಗೂ ಗೊತ್ತಿದೆ. 65 ಸೀಟ್ ಗಳು ಯಾಕೆ ಬಂದಿವೆ ಎನ್ನುವುದರ ಬಗ್ಗೆ ಅವರು ಉತ್ತರ ಹೇಳಬೇಕಾಗತ್ತೆ. ಜಗದೀಶ್ ಶೆಟ್ಟರ್ ಏನು ಅಂತ ಜನರಿಗೆ ಗೊತ್ತಿದೆ ಎಂದರು.
ಜಗದೀಶ್ ಶೆಟ್ಟರ್ ಒಬ್ಬರನ್ನ ಸೋಲಿಸಲು ಹೋಗಿ ಇಡೀ ಬಿಜೆಪಿಯನ್ನೇ ಸೋಲಿಸಿದ್ದೀರಾ ಅಂತ ಈಗಾಗಲೇ ಹೇಳಿದ್ದೇನೆ ಎಂದರು. ಇನ್ನು ತಮ್ಮ ಮೇಲೆ ಹಗರಣಗಳಿವೆ ಎಂಬ ಯತ್ನಾಳ್ ಹೇಳಿಕೆಗೆ ಇವೆಲ್ಲ ಹಿಟ್ ಆಂಡ್ ರನ್ ಆಗುತ್ತೆ, ದಾಖಲೆ ಕೊಡೋಕೆ ಎಷ್ಟು ದಿನ ಬೇಕು? ನಾಳೆನೇ ಕೊಡಲಿ ಎಂದರು.ಹಾಗೇನಾದ್ರೂ ಹಗರಣ ಮಾಡಿದ್ರೆ ಕೇಂದ್ರ ಸರಕಾರ ಬಿಡ್ತಿದ್ರಾ ನನ್ನ? ಎಂದರು.
ಲೋಕಸಭಾ, ವಿಧಾನಸಭಾ ಎಲ್ಲಾ ಚುನಾವಣೆಗಳು ಬೇರೆ ಬೇರೆ ಪಾರ್ಲಿಮೆಂಟ್ ಚುನಾವಣೆ ಹೀಗೆ ಆಗುತ್ತೆ ಅಂತ ಯಾರು ಕೂಡ ಹೇಳೋಕೆ ಆಗಲ್ಲ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ, ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗ್ತಾರೆ ಅಂತ ಕಲ್ಪನೆ ಮಾಡಿಕೊಂಡಿದ್ದಾರೆ. ಜನ ತಿರಸ್ಕಾರ ಮಾಡಿದ್ರೆ ಅದಕ್ಕೇನು ಉತ್ತರ? ಎಂದರು. ಕೇಂದ್ರದಲ್ಲಿದ್ದ ಸರ್ಕಾರ ರಾಜ್ಯದಲ್ಲಿಯು ಬರುತ್ತೆ ಅನ್ನೋದು ಭ್ರಮೆ ಆಗಿದೆ. ಲೋಕಸಭಾ ಚುನಾವಣೆ ಆದ ನಂತರ ರಾಜ್ಯ ಸರ್ಕಾರ ಹೋಗುತ್ತೆ ಅನ್ನೋದು ಭ್ರಮೆ ಎಂದರು.