ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅವರೇ ತೀರ್ಮಾನಿಸಬೇಕು. ಅವರೇ ಎಐಸಿಸಿ ಅಧ್ಯಕ್ಷರಾಗಿದ್ದು, ಸ್ಪರ್ಧೆ ಮಾಡುವ ನಿರ್ಧಾರ ಮಾಡಿದರೆ ಗೆಲ್ಲಿಸಿಕೊಂಡು ಬರುವ ಕೆಲಸ ನಾವು ಮಾಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (Dr G. Parameshwar) ಹೇಳಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಪ್ರಧಾನಿ ಹುದ್ದೆಗೆ ಖರ್ಗೆಯವರ ಹೆಸರನ್ನು ಪ್ರಸ್ತಾಪಿಸಿರುವುದು ನಮಗೂ ಸಂತೋಷ ತಂದಿದೆ. ಕರ್ನಾಟಕದಿಂದ ಮತ್ತೊಬ್ಬರು ಪ್ರಧಾನಿ ಆಗ್ತಾರೆ ಎನ್ನುವುದಾದರೆ ಎಲ್ಲರಿಗೂ ಖುಷಿಯ ವಿಚಾರವಾಗಿದೆ. ಈ ಬಗ್ಗೆ ಖರ್ಗೆಯವರು ಇನ್ನೂ ಸಮಯ ಇದೆ. ಮೊದಲು ಗೆಲ್ಲೋಣ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ
ಇದೇ ವೇಳೆ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯವರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಲ್ಲ ಎಂದು ಕಾಂಗ್ರೆಸ್ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಈಗ ಸಂಸತ್ತಿನಲ್ಲಿ ಸಸ್ಪೆಂಡ್ ಮಾಡಿದ್ದಕ್ಕಿಂತ ಬೇರೆ ಸಾಕ್ಷಿ ಬೇಕಾ? ನೂರಾರು ಜನ ಸಂಸದರನ್ನ ಹೊರಗಡೆ ಇಟ್ಟು ಪ್ರಮುಖವಾದ ಮಸೂದೆಗಳನ್ನು ಪಾಸ್ ಮಾಡಿದ್ದಾರೆ. ಇದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.