ಉಡುಪಿ: ಉದ್ಯಮಿಯೊಬ್ಬರಿಗೆ ಕೋಟ್ಯಾಂತರ ರೂ. ವಂಚನೆ ಪ್ರಕರಣದಲ್ಲಿ ಬಂಧಿತಳಾಗಿರುವ ಚೈತ್ರಾ ಕುಂದಾಪುರ ಅವರಿಗೆ ನಾನು ನಮ್ಮ ಮನೆಯಲ್ಲಿ ಯಾವುದೇ ಆಶ್ರಯ ಕೊಟ್ಟಿಲ್ಲ. ಇದೆಲ್ಲವೂ ಸುಳ್ಳು ಸುದ್ದಿ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಂ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿರುವ ಅವರು, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕಳೆದ 7 ದಿನಗಳಿಂದ ನಾನು ಚೈತ್ರಾಳಿಗೆ ಆಶ್ರಯ ಕೊಟ್ಟಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ವಂಚನೆ ಪ್ರಕರಣದ ಎಫ್ಐಆರ್ ದಾಖಲಾಗಿರುವುದೇ ಸೆಪ್ಟೆಂಬರ್ 8 ರಂದು. ಮತ್ತೆ ಹೇಗೆ 7 ದಿನಗಳಿಂದ ಆಶ್ರಯ ನೀಡುವುದಕ್ಕೆ ಸಾಧ್ಯ? ಸುಳ್ಳು ಸುದ್ದಿಯಿಂದ ನನಗೆ ಮಾನಸಿಕವಾಗಿ ನೋವು ಆಗಿದೆ ಎಂದರು.
ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ನಾವಿಬ್ಬರೂ ಕೆಲಸ ಮಾಡಿದ್ದೆವು. ಆಕೆಯ ಸಂಪರ್ಕ ಸಂಖ್ಯೆ ಇದೆ. ಆ ಬಳಿಕ ನಮ್ಮ ನಡುವೆ ಬೇರೆ ಯಾವ ರೀತಿಯ ಸಂಬಂಧವೂ ಇಲ್ಲ. ಸಿಸಿಬಿ ಪೊಲೀಸರು ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ವಶಪಡೆದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಆದರೂ ನನ್ನ ಮನೆಯಲ್ಲಿ ಎನ್ನುವ ಸುಳ್ಳು ಸುದ್ದಿಯನ್ನು ಹರಿ ಬಿಡಲಾಗುತ್ತಿದೆ. ನನಗೆ ಸಿಸಿಬಿ ಪೊಲೀಸರಿಂದ ಯಾವ ನೋಟಿಸ್ ವೂ ಬಂದಿಲ್ಲ. ಕಾಲ್ ರೆಕಾರ್ಡ್ ಪರಿಶೀಲನೆ ಮಾಡುತ್ತಾರೆ ಎಂದು ಸುರಯ್ಯ ಅಂಜುಂ ತಿಳಿಸಿದರು.