ನವದೆಹಲಿ: ಮುಖ್ಯಮಂತ್ರಿ ಉದ್ದೆಯನ್ನು ಬಿಟ್ಟು ಕೊಡಲು ನಾನು ತಯಾರಿದ್ದೇನೆ. ಆದರೆ ನನ್ನನ್ನು ಕುರ್ಚಿ ಬಿಡುತ್ತಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹೇಳುವ ಮೂಲಕ ಸಚಿನ್ ಪೈಲಟ್ಗೆ (Sachin Pilot) ಟಾಂಗ್ ನೀಡಿದ್ದಾರೆ.ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಬೆಂಬಲಿಗರೊಬ್ಬರು ತಾನು 4ನೇ ಬಾರಿಗೆ ಮುಖ್ಯಮಂತ್ರಿಯಾಗಬೇಕು ಎಂದು ಬಯಸುವುದಾಗಿ ಹೇಳಿದ್ದರು. ಅದಕ್ಕೆ ನಾನು ಅವರಿಗೆ ಈ ರೀತಿ ಹೇಳಿದೆ. ನಾನು ಮುಖ್ಯಮಂತ್ರಿ ಸ್ಥಾನ ತೊರೆಯಲು ರೆಡಿಯಿದ್ದೇನೆ, ಆದರೆ ಈ ಹುದ್ದೆಯು ನನ್ನನ್ನು ಹೋಗಲು ಬಿಡುತ್ತಿಲ್ಲ ಎಂದು ಹೇಳಿದೆ ಅಂತ ತಿಳಿಸಿದರು.
ಪಕ್ಷ ನನ್ನಲ್ಲಿರುವ ವಿಶೇಷತೆಗಳನ್ನು ಗುರುತಿಸಿ ಮೂರು ಬಾರಿ ರಾಜ್ಯವನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟಿದೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ ಎಲ್ಲರಿಗೂ ಒಪ್ಪಿಗೆಯಾಗುತ್ತದೆ. ಬಿಜೆಪಿ ಕುತಂತ್ರ ರಾಜಕಾರಣದಿಂದಾಗಿ ಕಾಂಗ್ರೆಸ್ನಲ್ಲಿ ಒಳಜಗಳವಾಗುತ್ತಿದೆ ಹೊರತು ಬೇರೇನಿಲ್ಲ. ಕಾಂಗ್ರೆಸ್ನಲ್ಲಿ (Congress) ಒಗ್ಗಟ್ಟಿದ್ದು, ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅದು ಸಾಬೀತಾಗಲಿದೆ ಎಂದು ಹೇಳಿದರು.