ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕೆ, ಸರ್ಕಾ ರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಅತ್ಯಗತ್ಯ. ಒಟ್ಟಾರೆ ಇಂದು ಯಾವುದೇ ಒಂದು ಕೆಲಸಕ್ಕೆ ಹೋದ್ರೂ ಆಧಾರ್ ಕಾರ್ಡ್ ಅಗತ್ಯ. ಇನ್ನು ನೀವು ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ ಮಾಡಬಹುದಾ? ಹಾಗಾದ್ರೆ ಒಬ್ಬ ವ್ಯಕ್ತಿ ತನ್ನ ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ಬದಲಾವಣೆ ಮಾಡಬಹುದು? ಈ ಪ್ರಕ್ರಿಯೆ ನಡೆಸೋದು ಹೇಗೆ? ಇಲ್ಲಿದೆ ಮಾಹಿತಿ.
ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ಬದಲಾಯಿಸಬಹುದು?
ಆಧಾರ್ ಕಾರ್ಡ್ ನಲ್ಲಿ ನೀವು ಎಷ್ಟು ಬಾರಿ ಬೇಕಾದರೂ ವಿಳಾಸ ಬದಲಾಯಿಸಬಹುದು. ಈ ತನಕ ವಿಳಾಸ ಬದಲಾವಣೆಗೆ ಸಂಬಂಧಿಸಿ ಯಾವುದೇ ಮಿತಿ ಹೇರಿಲ್ಲ. ಆದರೆ, ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು. ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಗೆ ಸಮರ್ಪಕ ಕಾರಣ ನೀಡುವುದು ಅಗತ್ಯ ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.
ಆಧಾರ್ ನಲ್ಲಿ ಯಾವೆಲ್ಲ ಮಾಹಿತಿ ಅಪ್ಡೇಟ್ ಮಾಡ್ಬಹುದು?
ಹೆಸರು, ವಿಳಾಸ, ಜನ್ಮದಿನಾಂಕ, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಸಂಬಂಧದ ಸ್ಟೇಟಸ್ ಅನ್ನು ಅಪ್ಡೇಟ್ ಮಾಡಬಹುದು. ಹಾಗೆಯೇ ಕಣ್ರೆಪ್ಪೆ, ಬೆರಳಚ್ಚು ಹಾಗೂ ಮುಖದ ಫೋಟೋ ಕೂಡ ಅಪ್ಲೋಡ್ ಮಾಡಬಹುದು.
ಆಧಾರ್ ನಲ್ಲಿ ಜನ್ಮದಿನಾಂಕ ಅಪ್ಡೇಟ್ ಮಾಡ್ಬಹುದಾ?
ಮಾಡಬಹುದು. ಆದರೆ, ಒಂದು ಬಾರಿ ಮಾತ್ರ ಜನ್ಮದಿನಾಂಕ ಅಪ್ಡೇಟ್ ಮಾಡಬಹುದು. ವಿಶೇಷ ಪ್ರಕರಣಗಳಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಬಾರಿ ಆಧಾರ್ ನಲ್ಲಿ ಜನ್ಮದಿನಾಂಕ ಅಪ್ಡೇಟ್ ಮಾಡಲು ಅವಕಾಶ ನೀಡಲಾಗುತ್ತದೆ. ಇದಕ್ಕಾಗಿ ನೀವು ಆಧಾರ್ ಕೇಂದ್ರದಲ್ಲಿ ಅಪ್ಡೇಟ್ ಮನವಿ ಸಲ್ಲಿಸಬೇಕು. ಆ ಬಳಿಕ ವಿನಾಯ್ತಿ ಅಡಿಯಲ್ಲಿ ಅನುಮೋದನೆ ಪಡೆಯಲು ಯುಐಡಿಎಐ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಬೇಕು. ಆ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಪರಿಶೀಲನೆ ಬಳಿಕ ಮನವಿ ಅನುಮೋದನೆ ಅಥವಾ ನಿರಾಕರಣೆ ನಡೆಯುತ್ತದೆ. ನೀವು ನಿಮ್ಮ ಆಧಾರ್ ನಲ್ಲಿ ಅರ್ಹ ಜನ್ಮ ದಿನಾಂಕದ (ಡಿಒಬಿ) ದಾಖಲೆ ಮೂಲಕ ಆಧಾರ್ ನಲ್ಲಿ ಜನ್ಮ ದಿನಾಂಕವನ್ನು ನವೀಕರಿಸಬಹುದು.
ಆಧಾರ್ ನಲ್ಲಿ ವಿಳಾಸ ಅಪ್ಡೇಟ್ ಮಾಡೋದು ಹೇಗೆ?
ಆಧಾರ್ ನಲ್ಲಿ ವಿಳಾಸ ಅಪ್ಡೇಟ್ ಮಾಡಲು ನೀವು ಯುಐಡಿಎಐ ಅಧಿಕೃತ ವೆಬ್ ಸೈಟ್ ಅಥವಾ ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ಇನ್ನು ಆಧಾರ್ ನಲ್ಲಿ ವಿಳಾಸ ಅಪ್ಡೇಟ್ ಮಾಡಲು ವಿಳಾಸ ದೃಢೀಕರಣ ದಾಖಲೆ ನೀಡಬೇಕು. ಕೆಲವು ದಿನಗಳ ಬಳಿಕ ಆಧಾರ್ ನಲ್ಲಿ ಅಪ್ಡೇಟ್ ಮಾಡಿದ ದಾಖಲೆಗಳು ಕಾಣಿಸುತ್ತವೆ.
ಸಮೀಪದ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಅಪ್ಡೇಟ್ ಮಾಡಬಹುದು ಇಲ್ಲವೇ ಆನ್ ಲೈನ್ ಮೂಲಕ ಕೂಡ ಮಾಹಿತಿ ನವೀಕರಣ ಮಾಡಬಹುದು.ಹೆಸರು ಮತ್ತು ವಿಳಾಸದಂತಹ ಮಾಹಿತಿಗಳನ್ನು ಆಗಾಗ ಬದಲಾವಣೆ ಮಾಡಬೇಕಾಗುತ್ತದೆ. ಹೊಸ ಸ್ಥಳಗಳಿಗೆ ವಾಸ್ತವ್ಯ ಬದಲಾವಣೆ ಮಾಡಿದಾಗ, ಮದುವೆ ಬಳಿಕ, ಸಂಬಂಧಿಕರ ಮರಣದ ಬಳಿಕ ಮುಂತಾದ ಸಂದರ್ಭಗಳಲ್ಲಿ ವಿಳಾಸ ಬದಲಾಗುತ್ತದೆ. ಆಗ ಈ ಮಾಹಿತಿಯನ್ನು ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡೋದು ಅಗತ್ಯ.