ಬೆಂಗಳೂರು: ಬಿಎಂಟಿಸಿಗೆ ಗೃಹಿಣಿಯೊಬ್ಬರು ಬಲಿಯಾದ ಘಟನೆ ಸಿಲ್ಕ್ಬೋರ್ಡ್ ಸಮೀಪದ ಮಡಿವಾಳ ಫ್ಲೈಓವರ್ ಮೇಲೆ ನಡೆದಿದೆ. ಸೀಮಾ ಬಿಎಂಟಿಸಿಗೆ ಬಲಿಯಾದ ಗೃಹಿಣಿ. ಬುಧವಾರ ಸಂಜೆ 6:30ರ ವೇಳೆಗೆ ಘಟನೆ ನಡೆದಿದ್ದು, ಗೃಹಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದ ಅಪಘಾತವಾಗಿದೆ ಎಂದು ಆರೋಪಿಸಲಾಗಿದೆ. ಬಸ್ ಪಕ್ಕದಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದ್ದರಿಂದ ಸವಾರರು ಆಯತಪ್ಪಿ ಬಿದ್ದಿದ್ದಾರೆ. ಘಟನೆಯಲ್ಲಿ ಗೃಹಿಣಿ ಸಾವನ್ನಪ್ಪಿದರೆ ಒಂದೂವರೆ ವರ್ಷದ ಮಗು ಗಾನವಿ ಹಾಗೂ ಆಕೆಯ ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.
ತಮ್ಮ ಮಗುವಿನೊಂದಿಗೆ ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಪತಿ ಗುರುಮೂರ್ತಿ ಸಿಂಗಸಂದ್ರ ಬೆಸ್ಕಾಂ ಉದ್ಯೋಗಿಯಾಗಿದ್ದು, ಕಳೆದ 8 ವರ್ಷದಿಂದ ಬೆಸ್ಕಾಂನಲ್ಲಿ ಲೈನ್ಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೂಲತಃ ವಿಜಯನಗರ ಜಿಲ್ಲೆ, ಗುಡೇಕೋಟೆ ಕೂಡ್ಲಿಗಿಯ ಶ್ರೀಕಂಠಪುರ ತಾಂಡದ ನಿವಾಸಿಗಳಾದ ದಂಪತಿ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತ ಗೃಹಿಣಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಬಳಿಕ ಚಾಲಕ ಮತ್ತು ನಿರ್ವಾಹಕ ಬಸ್ ಬಿಟ್ಟು ಪರಾರಿಯಾಗಿದ್ದಾರೆ.