ಮುಸ್ಲಿಂ ವಿದ್ಯಾರ್ಥಿನಿಯರ ಮನೆಗೆ ತೆರಳಿ ವಿಚಾರಣೆ ನಡೆಸುವ ತಾಕತ್ತಿಲ್ಲವೇ ?: ವಿ.ಸುನಿಲ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹಿಟ್ಲರ್ ಸರ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾರಂಭಿಸಿದ್ದಾರೆ ಎಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ನೊಂದ ವಿದ್ಯಾರ್ಥಿನಿಯರ ಪರ ಧ್ವನಿ ಎತ್ತಿದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಖಂಡಿಸಿದ್ದಾರೆ.
ಸಂತ್ರಸ್ತೆಯರ ಪರವಾಗಿ ಧ್ವನಿ ಎತ್ತುವುದು ತಪ್ಪು ಎಂದಾದರೆ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರ ಹಕ್ಕು, ಮಾನ- ಸಮ್ಮಾನದ ಬಗ್ಗೆ ಗೌರವ ಇಲ್ಲವೆಂದು ಅರ್ಥವೇ ? ನಿಮ್ಮ ಮನೆಯ ಹೆಣ್ಣು ಮಕ್ಕಳಿಗೂ ಅಪಮಾನವಾದರೆ ಸಹಿಸುತ್ತೀರಾ ಎಂದು ಶಕುಂತಲಾ ಪ್ರಶ್ನಿಸಿದ್ದರಲ್ಲಿ ತಪ್ಪೇನಿದೆ ?ಸಿದ್ದರಾಮಯ್ಯನವರೇ ಇನ್ನಾದರೂ ನಿಮ್ಮ ಬೂಟಾಟಿಕೆ ನಿಲ್ಲಿಸಿ.
ಹಿಟ್ಲರ್ , ಮುಸಲೋನಿಯವರನ್ನೇ ಮೀರಿಸುವ ಸರ್ವಾಧಿಕಾರಿ ನೀವು. ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ತ್ರೀ ಸಮಾನತೆ, ಸಂವಿಧಾನದ ಆಶಯ ಎಂಬ ಶಬ್ದಗಳನ್ನು ಬಳಸುವುದಕ್ಕೆ ನೀವು ಅನರ್ಹ. ಸಾಕು ಮಾಡಿ ಸೋಗು ಎಂದು ಕಿಡಿಕಾರಿದ್ದಾರೆ.
ದಮ್ಮು, ತಾಕತ್ತಿನ ಬಗ್ಗೆ ವೀರಾವೇಶದಿಂದ ಮಾತನಾಡುವ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪೊಲೀಸರಿಗೆ ಉಡುಪಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವುದಕ್ಕೆ ತಾಕತ್ತಿಲ್ಲ.ವಿಡಿಯೋ ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ರಾಜ್ಯದ ಗಮನ ಸೆಳೆದ ರಶ್ಮಿಯವರ ಮನೆಗೆ ರಾತ್ರೋರಾತ್ರಿ ತೆರಳಿ ವಿಚಾರಣಾ ಹಿಂಸೆ ಮಾಡುವ ಪೊಲೀಸರಿಗೆ ಸಹ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರ ಮನೆಗೆ ತೆರಳಿ ವಿಚಾರಣೆ ನಡೆಸುವ ತಾಕತ್ತಿಲ್ಲವೇ ? ಟ್ವೀಟ್ ಮಾಡಿದ್ದು ದೊಡ್ಡ ಅಪರಾಧವೊ, ವಿಡಿಯೊ ಮಾಡಿದ್ದು ಅಪರಾಧವೊ? ಎಂದು ಪ್ರಶ್ನಿಸಿದ್ದಾರೆ.

Loading

Leave a Reply

Your email address will not be published. Required fields are marked *