ಖಾಸಗಿ ಬಸ್‌ʼಗಳಲ್ಲಿ ಧ್ವನಿ ಪ್ರಕಟಣೆ ಅಳವಡಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು;- ಬೆಂಗಳೂರಿನ ಹೈಕೋರ್ಟ್ ಪೀಠವು ಖಾಸಗಿ ಬಸ್‌ಗಳಲ್ಲಿ ಧ್ವನಿ ಪ್ರಕಟಣೆ ಅಳವಡಿಸಲು ಸೂಚನೆ ನೀಡಿದೆ. ಎನ್. ಶ್ರೇಯಸ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎನ್.ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ. ವಿಚಾರಣೆ ವೇಳೆ, ಅರ್ಜಿದಾರರು ಬಿಎಂಟಿಸಿ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಆಡಿಯೋ ವ್ಯವಸ್ಥೆ ಅಳವಡಿಸಲು ನಿರ್ದೇಶನ ನೀಡುವಂತೆ ಕೋರಿದ್ದಾರೆ. ಆದರೆ, ಕೆಲವು ಮಾರ್ಗಗಳಲ್ಲಿ ಖಾಸಗಿ ಬಸ್‌ಗಳೂ ಕೂಡ ಸಂಚಾರ ಕೈಗೊಳ್ಳುತ್ತಿರುವುದರಿಂದ, ಆ ಬಸ್​ಗಳಲ್ಲಿ ವಿಶೇಷ ಚೇತನರ ಪ್ರಯಾಣಕ್ಕೆ ಅಗತ್ಯ ನೆರವನ್ನು ಕಲ್ಪಿಸಿಕೊಡಬೇಕಿದೆ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರ ಈ ವಿಚಾರದಲ್ಲಿ ಸಾಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ. ಸರ್ಕಾರ ಖಾಸಗಿ ಬಸ್ ಆಪರೇಟರ್‌ಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿ ಸುತ್ತೋಲೆ ಹೊರಡಿಸಬೇಕು. ಆ ನಿರ್ದೇಶನ ಹಾಲಿ ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬಸ್‌ಗಳಿಗೆ ಮಾತ್ರವಲ್ಲ, ಹೊಸದಾಗಿ ಪರ್ಮಿಟ್ ನೀಡುವ ಬಸ್​ಗಳಿಗೂ ಅನ್ವಯವಾಗುವಂತೆ ಇರಬೇಕು ಎಂದು ನ್ಯಾಯಾಲಯ ತಾಕೀತು ಮಾಡಿತು.

ಅರ್ಜಿದಾರರು ಬಿಎಂಟಿಸಿ ಮತ್ತು ರಾಜ್ಯ ಸರ್ಕಾರ ವಿಶೇಷ ಚೇತನ ಸ್ನೇಹಿ ಪ್ರಯಾಣಿಕರಿಗೆ ಅನುಕೂಲವಾಗವಂತೆ ಮೊಬೈಲ್ ಆಯಪ್​ ಸಿದ್ಧಪಡಿಸುವಂತೆ ಮನವಿ ಸಲ್ಲಿಸಬೇಕು. ಅದನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಬಿಎಂಟಿಸಿ ಮತ್ತು ರಾಜ್ಯ ಸರ್ಕಾರ ಈ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಹೆಚ್ಚುವರಿ ಅಫಿಡವಿಟ್ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿರುವ ನ್ಯಾಯಾಲಯ ನಾಲ್ಕು ವಾರ ವಿಚಾರಣೆ ಮುಂದೂಡಿದೆ.

Loading

Leave a Reply

Your email address will not be published. Required fields are marked *