ಶಿಮ್ಲಾ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಧುಮ್ಮಿಕ್ಕುತ್ತಿರುವ ನದಿಗಳಲ್ಲಿ ಸೇತುವೆ, ಮನೆಗಳು ಕೊಚ್ಚಿಕೊಂಡು ಹೋಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಸೋಲನ್, ಶಿಮ್ಲಾ, ಸಿರ್ಮೌರ್, ಕುಲು, ಮಂಡಿ, ಕಿನ್ನೌರ್ ಮತ್ತು ಲಾಹೌಲ್ನಲ್ಲಿ ಮುಂದಿನ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ ಈ 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇನ್ನುಳಿದಂತೆ ಉನಾ, ಹಮೀರ್ಪುರ, ಕಾಂಗ್ರಾ ಹಾಗೂ ಚಂಬಾದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಾತ್ರವಲ್ಲದೇ ಮಂಡಿ, ಕಿನ್ನೌರ್ ಹಾಗೂ ಲಾಹೌಲ್ ಭಾಗದಲ್ಲಿ ಹಠಾತ್ ಪ್ರವಾಹ ಎಚ್ಚರಿಕೆಯನ್ನು ನೀಡಲಾಗಿದೆ. ಹಿಮಾಚಲದಲ್ಲಿ ಭಾರೀ ಮಳೆಗೆ ಈಗಾಗಲೇ 12ಕ್ಕೂ ಹೆಚ್ಚು ಪ್ರಮುಖ ಸೇತುವೆಗಳೇ ಹಾನಿಗೊಳಗಾಗಿವೆ. ಭೂಕುಸಿತ, ವಿದ್ಯುತ್ ವ್ಯತ್ಯಯ, ರಸ್ತೆಗಳಿಗೂ ಹಾನಿಯಾಗಿದೆ. ರಾಜ್ಯದಲ್ಲಿ ಕಳೆದ 48 ಗಂಟೆಗಳಲ್ಲಿ ವರುಣನ ಅಬ್ಬರಕ್ಕೆ 20 ಮಂದಿ ಬಲಿಯಾಗಿದ್ದಾರೆ.