ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುಡು ಬಿಸಿಲಿನಿಂದ ಕಂಗೆಟ್ಟಿದ್ದಂತ ಜನತೆಗೆ ಇಂದು ಮಧ್ಯಾಹ್ನವೇ ಧಾರಾಕಾರ ಮಳೆಯಾಗುವ ಮೂಲಕ ತಂಪೆರೆದಿದೆ. ಅಲ್ಲದೇ ಕೆಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿರುವುದಾಗಿ ವರದಿಯಿಂದ ತಿಳಿದು ಬಂದಿದೆ.
ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಮೆಜೆಸ್ಟಿಕ್, ಕೆ.ಆರ್ ಮಾರುಕಟ್ಟೆ, ಮಲ್ಲೇಶ್ವರಂ, ನಾಗರಭಾವಿ, ಕಾಮಾಕ್ಷಿಪಾಳ್ಯ, ಗಿರಿನಗರ, ಜಯನಗರ, ವಿಜಯನಗರ, ಜೆ.ಪಿ ನಗರ, ನಂದಿನಿ ಲೇಔಟ್, ರಾಜಾಜಿನಗರ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ.
ದಿಢೀರ್ ಧಾರಾಕಾರ ಮಳೆಯಿಂದಾಗಿ ವಾಹನ ಸವಾರರು, ರಸ್ತೆ ಬದಿಯ ವ್ಯಾಪಾರಿಗಳು ಪರದಾಡುವಂತೆ ಆಗಿದೆ. ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ನುಗ್ಗಿದ ಪರಿಣಾಮ, ವಾಹನ ಸವಾವರು ಮುಂದೆ ಸಾಗದಂತೆ ಟ್ರಾಫಿಕ್ ಜಾಮ್ ಉಂಟಾಗಿದೆ.
ನಗರದಲ್ಲಿ ಇಂದು ಭಾರೀ ಮಳೆಯಿಂದಾಗಿ ಬೃಹತ್ ಗಾತ್ರದ ಮರವೊಂದು ಬೈಕ್, ಕಾರಿನ ಮೇಲೆ ಬಿದ್ದು ಜಖಂ ಗೊಂಡಿರುವಂತ ಘಟನೆ ಕುಮಾರ ಕೃಪಾ ರಸ್ತೆಯ ಚಿತ್ರಕಲಾ ಪರಿಷತ್ ಮುಂಭಾಗದಲ್ಲಿ ನಡೆದಿದೆ.