ವೆಸ್ಟ್ ಇಂಡೀಸ್ ತಂಡಕ್ಕೆ ಭಾರೀ ದಂಡ

ಜಿಂಬಾಬ್ವೆ ವಿರುದ್ಧ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ನ ಹರಾರೆ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ರನ್‌ಚೇಸ್‌ ವೇಳೆ ಮುಗ್ಗರಿಸಿದ ವೆಸ್ಟ್‌ ಇಂಡೀಸ್‌ ತಂಡ 35 ರನ್‌ಗಳ ಹೀನಾಯ ಸೋಲುಂಡಿತು. ಜೊತೆಗೆ ತಂಡದ ಆಟಗಾರರು ಪಂದ್ಯದ ಸಂಭಾವನೆಯ ಶೇ. 60ರಷ್ಟನ್ನು ದಂಡವಾಗಿ ತೆರುವಂತ್ತಾಗಿದೆ.

 

ಐಸಿಸಿ ಅಂತಾರಾಷ್ಟ್ರೀಯ ಪ್ಯಾನೆಲ್ ಆಫ್ ಮ್ಯಾಚ್‌ ರೆಫ್ರಿ ಆಗಿರುವ ಮುಹಮ್ಮದ್‌ ಜಾವೇದ್‌ ವೆಸ್ಟ್‌ ಇಂಡೀಸ್‌ ವಿರುದ್ಧ ದಂಡ ಹೇರಿದ್ದಾರೆ. ನಿಗದಿತ ಸಮಯದ ಅಂತ್ಯಕ್ಕೆ ತನ್ನ ಖಾತೆಯ 50 ಓವರ್‌ಗಳನ್ನು ಪೂರೈಸಲು ವೆಸ್ಟ್‌ ಇಂಡೀಸ್‌ ಇನ್ನು 3 ಓವರ್‌ಗಳನ್ನು ಎಸೆಯಬೇಕಿತ್ತು. ಇದೇ ಕಾರಣಕ್ಕೆ ಓವರ್‌ ಒಂದಕ್ಕೆ ಶೇ. 20ರಷ್ಟು ದಂಡದಂತೆ ಶೇ.60ರಷ್ಟು ದಂಡ ಹೇರಲಾಗಿದೆ. ಕ್ಯಾಪ್ಟನ್‌ ಶೇಯ್‌ ಹೋಪ್‌ ಈ ಪ್ರಮಾದ ಒಪ್ಪಿಕೊಂಡ ಕಾರಣ ಹೆಚ್ಚಿನ ವಿಚಾರಣ ನಡೆಸಲಾಗಲಿಲ್ಲ. ಆನ್‌ಫೀಲ್ಡ್‌ ಅಂಪೈರ್‌ಗಳಾದ ಸ್ಯಾಮ್‌ ನೊಗಾಸ್ಕಿ, ರವೀಂದ್ರ ವಿಮಲಾಸರಿ, ಮೂರನೇ ಅಂಪೈರ್‌ ರೊಲ್ಯಾಂಡ್‌ ಬ್ಲ್ಯಾಕ್‌ ಮತ್ತು ನಾಲ್ಕನೇ ಅಂಪೈರ್‌ ಅಲ್ಲಾಹುದ್ದೀನ್‌ ಪಾಲೇಕರ್‌ ವಿಂಡೀಸ್‌ ವಿರುದ್ಧ ದಂಡ ಹೇರಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ ತಂಡ ವಿಂಡೀಸ್‌ ಫೀಲ್ಡರ್‌ಗಳು ಕೈಚೆಲ್ಲಿದ ಕ್ಯಾಚ್‌ಗಳ ಸಂಪೂರ್ಣ ಲಾಭ ತೆಗೆದುಕೊಂಡು 268 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಜಿಂಬಾಬ್ವೆ ಪರ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸಿಕಂದರ್‌ ರಾಜಾ ಮತ್ತು ರಯಾನ್‌ ಬರ್ಲ್‌ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ಬಳಿಕ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌, ಕೈಲ್‌ ಮೇಯರ್ಸ್‌ (56) ಮತ್ತು ರಾಸ್ಟನ್‌ ಚೇಸ್‌ (44) ಅವರ ಹೋರಾಟದ ಹೊರತಾಗಿಯೂ ಗುರಿ ಮುಟ್ಟಲು ವಿಫಲವಾಯಿತು. ಜಿಂಬಾಬ್ವೆ ಬೌಲರ್‌ಗಳಾದ ತೆಂಡೈ ಚಟಾರ (52ಕ್ಕೆ 3) ಮತ್ತು ಸಿಕಂದರ್‌ ರಾಜಾ (36ಕ್ಕೆ 2) ಭರ್ಜರಿ ದಾಳಿ ಸಂಘಟಿಸಿ ವಿಂಡೀಸ್‌ ಬ್ಯಾಟರ್‌ಗಳನ್ನು ಬೇಟೆಯಾಡಿದರು. ಅವರಿಗೆ ಬ್ಲೆಸಿಂಗ್‌ ಮುಜರಾಬಾನಿ ಮತ್ತು ರಿಚರ್ಡ್‌ ಎನ್ಗವಾರ ತಲಾ 2 ವಿಕೆಟ್‌ ಪಡೆದು ಉತ್ತಮ ಸಾಥ್‌ ನೀಡಿದರು. ಆಲ್‌ರೌಂಡ್‌ ಆಟವಾಡಿದ ಸಿಕಂದರ್ ರಾಜಾ ಪಂದ್ಯಶ್ರೇಷ್ಠ ಗೌರವ ಪಡೆದರು.

‘ಎ’ ಗುಂಪಿನಿಂದ ಈಗಾಗಗಲೇ ಜಿಂಬಾಬ್ವೆ, ನೆದರ್ಲೆಂಡ್ಸ್‌ ಮತ್ತು ವೆಸ್ಟ್‌ ಇಂಡೀಸ್‌ ಮುಂದಿನ ಹಂತಕ್ಕೆ ತೇರ್ಗಡೆಯಾಗಿವೆ. ಇದೇ ವರ್ಷ ಭಾರತದಲ್ಲಿ ನಡೆಯಲಿರುವ ಒಡಿಐ ವಿಶ್ವಕಪ್ ಟೂರ್ನಿಗೆ ಎರಡು ಬಾರಿಯ ಚಾಂಪಿಯನ್ಸ್ ವೆಸ್ಟ್‌ ಇಂಡೀಸ್‌ ಆಯ್ಕೆಯಾಗಲು, ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಫೈನಲ್‌ ತಲುಪಬೇಕಿದೆ.

Loading

Leave a Reply

Your email address will not be published. Required fields are marked *