ಹಾವೇರಿ : ಆರೋಗ್ಯ ಎಲ್ಲರಿಗೂ ಮುಖ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರ ಆರೋಗ್ಯ ಕಾಪಾಡಲು, ಉಜ್ವಲ, ಆಯುಷ್ಮಾನ್ ಭಾರತದಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಭಾನುವಾರ ಶಿಗ್ಗಾವಿ ಕ್ಷೇತ್ರದ ಸವಣೂರು ತಾಲೂಕಿನ ಹುರುಳಿಕುಪ್ಪಿ ಗ್ರಾಮದಲ್ಲಿ ಕ್ಷಮತಾ ಸೇವಾ ಸಂಸ್ಥೆ ಹುಬ್ಬಳ್ಳಿ, ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್, ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಿಗ್ಗಾವಿ ಜಂಟಿಯಾಗಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಆರೋಗ್ಯ ಎಲ್ಲರಿಗೂ ಅವಶ್ಯವಾಗಿರುವಂಥದ್ದು, ಆರೋಗ್ಯ ಇಲ್ಲದಿದ್ದರೆ ಏನೂ ನಡೆಯುವುದಿಲ್ಲ. ಬಹಳಷ್ಟು ಜನ ಹಗಲಿರುಳು ದುಡಿಯುತ್ತಾರೆ. ಸಣ್ಣಪುಟ್ಟ ಜ್ವರ ಬಂದಾಗ ತೋರಿಸಿಕೊಳ್ಳುವುದಿಲ್ಲ. ಆರೋಗ್ಯ ಹದಗೆಟ್ಟ ಮೇಲೆ ಚಿಕಿತ್ಸೆ ಪಡೆಯುಲು ಹೊಗಲು ಆಗುವುದಿಲ್ಲ. ಮನೆಯಲ್ಲಿ ತಾಯಂದಿರ ಆರೋಗ್ಯ ಅತ್ಯಂತ ಮುಖ್ಯ. ನಿಮ್ಮ ನಿತ್ಯದ ಕೆಲಸದಲ್ಲಿ ನಿಮ್ಮ ಆರೋಗ್ಯ ನಿರ್ಲಕ್ಷ್ಯ ಮಾಡಬಾರದು ಎಂದು ಕಿವಿಮಾತು ಹೇಳಿದರು.