ಬೆಳಗಾವಿ: ಕಾಂಗ್ರೆಸ್ನವರು ಬಿಜೆಪಿಯಿಂದ ಸಭ್ಯತೆ ಕಲಿಯುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ಹೇಳಿದ್ದಾರೆ. ಕಾಂಗ್ರೆಸ್ನವರು ಸಭ್ಯತೆ ಕಲಿಯಲಿ ಎಂಬ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘‘ಇದೇನು ಮೊದಲಲ್ಲ. ಈ ರಾಷ್ಟ್ರದಲ್ಲಿ ಅಂಬೇಡ್ಕರ್ ಅವರ ಸಂವಿಧಾನವನ್ನು ನಾವೆಲ್ಲರೂ ಅಪ್ಪಿ, ಒಪ್ಪಿ ಬಾಳುತ್ತಿದ್ದೇವೆ.
ಆದರೆ, ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿದ್ದ ಆ ವ್ಯಕ್ತಿ ಸಂಸ್ಕಾರವಂತರಾಗಿ ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯವರು ಎಷ್ಟು ಜಾಣರು ಎಂದರೆ ಒಳ್ಳೆಯ ಮಗು ಹುಟ್ಟಿದರೆ ನಮ್ಮದು, ಕೆಟ್ಟ ಮುಗು ಹುಟ್ಟಿದರೆ ಬೀದಿಯದ್ದು ಎನ್ನುತ್ತಾರೆ‘‘ ಎಂದು ಲೇವಡಿ ಮಾಡಿದರು.
ಟೀಕೆ ಮಾಡಲು ಇವರಿಗೆ ಒಳ್ಳೆಯ ಪದಗಳೇ ಸಿಗುವುದಿಲ್ಲ. ಹಿಂದೆ ಜೆ ಎಚ್ ಪಟೇಲರು ಸೇರಿ ಅನೇಕ ರಾಜಕಾರಣಿಗಳು ಬಹಳ ತೀಕ್ಷ್ಣವಾಗಿ ಟೀಕೆ ಮಾಡುತ್ತಿದ್ದರು. ಆದರೆ, ಬಿಜೆಪಿಯವರಿಗೆ ಪದಗಳು ಸಿಗುವುದಿಲ್ಲವೇ? ಈ ರೀತಿ ಮಾತಾಡುವುದು ಸಾರ್ವಜನಿಕವಾಗಿ ಒಳ್ಳೆಯದಲ್ಲ. ಬಿಜೆಪಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಹಾಗಾದರೆ ಒಂದು ಸಮುದಾಯ ಬಿಟ್ಟು ಉಳಿದವುಗಳ ಅಭಿವೃದ್ಧಿ ಮಾಡಲು ಆಗುತ್ತಾ? ಒಂದು ದಿನವಾದರೂ ಮಾಧ್ಯಮಗಳ ಮುಂದೆ ಬಂದು ಅವರ ಕಾರ್ಯಕ್ರಮಗಳ ಬಗ್ಗೆ ಮೋದಿ ಹೇಳುತ್ತಾರಾ? ಬರೀ ಅಲ್ಲಿಯೇ ಕುಳಿತುಕೊಂಡು ಸುಳ್ಳು ಹೇಳಿ, ಪ್ರಪಂಚ ಸುತ್ತುತ್ತೇವೆ ಎನ್ನುತ್ತಾರೆ ಎಂದು ಕಿಡಿಕಾರಿದರು.