ಕೊಬ್ಬರಿಗೆ ಬೆಂಬಲ ಬೆಲೆ ನೀಡಿದ ಕೇಂದ್ರವನ್ನು ಅಭಿನಂದಿಸಿದ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಕೇಂದ್ರ ಸರಕಾರ ಕೊಬರಿಗೆ ಬೆಂಬಲ ಬೆಲೆ ನೀಡಿರುವುದನ್ನು ಸ್ವಾಗತಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ರಾಜ್ಯದಲ್ಲಿ ನಾಫೆಡ್ ಮೂಲಕ 1.5 ಲಕ್ಷ ಮೆಟ್ರಿಕ್ ಟನ್ ಕೊಬರಿ ಖರೀದಿಸಬೇಕು ಎಂದು ಕೇಂದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು; ಕೊಬರಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರಕಾರ ಹಾಗೂ ಪ್ರಧಾನಿಗಳಾದ ಮೋದಿ ಅವರಿಗೆ ರಾಜ್ಯದ ಸಮಸ್ತ ರೈತರ ಪರವಾಗಿ ಕೃತಜ್ಞತೆಗಳು ಹಾಗೂ ಅಭಿನಂದನೆಗಳು. ಮಿಲ್ಲಿಂಗ್‌ ಕೊಬರಿಗೆ 300 ರೂ. ಹಾಗೂ ಉಂಡೆ ಕೊಬರಿಗೆ 250 ರೂ. (ಪ್ರತಿ ಕ್ವಿಂಟಾಲ್‌ಗೆ) ಏರಿಕೆ ಮಾಡಿರುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ ಎಂದು ತಿಳಿಸಿದ್ದಾರೆ

ಡಿಸೆಂಬರ್ 21ರಂದು ನವದೆಹಲಿಯಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ನೇತೃತ್ವದಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಕೊಬರಿ ರೈತರ ಸಂಕಷ್ಟ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮಾನ್ಯ ಪ್ರಧಾನಿಗಳು ನಮ್ಮ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎಂದಿದ್ದಾರೆ ಅವರು.

ತೆಂಗು ಬೆಳೆಗಾರರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ನೆರವು ಬೇಕಿದೆ. ಮಧ್ಯವರ್ತಿಗಳು ಅವರನ್ನು ಕಿತ್ತು ತಿನ್ನುತ್ತಿದ್ದಾರೆ. ಇದು ಎಲ್ಲೆಡೆ ಕಂಡು ಬರುತ್ತಿರುವ ನೈಜ ಚಿತ್ರಣ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ನಾಫೆಡ್ ಮೂಲಕವೇ ಕೊನೆಪಕ್ಷ ರಾಜ್ಯದಲ್ಲಿ 1.5 ಲಕ್ಷ ಮೆಟ್ರಿಕ್ ಟನ್ ಕೊಬರಿ ಖರೀದಿಸಬೇಕು ಎಂದು ಕೇಂದ್ರವನ್ನು, ಪ್ರಧಾನಿಗಳಲ್ಲಿ ವಿನಂತಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

Loading

Leave a Reply

Your email address will not be published. Required fields are marked *