ನಾವೂ ಶ್ರೀರಾಮ ಪೂಜೆ ಮಾಡಿಲ್ವಾ? ಇವರೊಬ್ಬರೇನಾ ಮಾಡುವುದು?: ಸಿದ್ದರಾಮಯ್ಯ

 ಬೆಂಗಳೂರು: ಹಿಂದುತ್ವ ಬೇರೆ, ಹಿಂದೂ‌ ಬೇರೆ, ನಾನೂ ಊರಲ್ಲಿ ಧನುರ್ಮಾಸದ ಸಂದರ್ಭದಲ್ಲಿ ಭಜನೆಗೆ ಹೋಗ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸಾಫ್ಟ್ ಹಿಂದುತ್ವ ಹಾರ್ಡ್ ಹಿಂದುತ್ವ ಎಂದರೇನು? ಸಾಫ್ಟ್ ಹಾಗೂ ಹಾರ್ಡ್ ಹಿಂದುತ್ವ ಇಲ್ಲ.  ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ. ನಾವೂ ಶ್ರೀರಾಮ ಪೂಜೆ ಮಾಡಿಲ್ವಾ? ಇವರೊಬ್ಬರೇನಾ ಮಾಡುವುದು? ಅವರು ಮಾತ್ರ ಹಿಂದೂಗಳಾ ನಾವಲ್ಲವಾ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಆಧುನಿಕ ಭಾರತಕ್ಕೆ ನೆಹರೂ ಅಡಿಪಾಯ ಕಾರಣ. ಬಿಜೆಪಿ ಅಧಿಕಾರ ಅವಧಿಯಲ್ಲಿ ಒಂದೇ ಒಂದು ಅಣೆಕಟ್ಟು ಕಟ್ಟಿಲ್ಲ. ಇರುವ ಅಣೆಕಟ್ಟು ಕಾಂಗ್ರೆಸ್ ಅವಧಿಯಲ್ಲಿ ಕಟ್ಟಿದ್ದು. ಹಾಗಾದರೆ ನೀವು ಏನು ಮಾಡಿದ್ದೀರಿ? ಎಂದು ಬಿಜೆಪಿಗೆ ಪ್ರಶ್ನಿಸಿದರು.

ಡಿಜಿಟಲ್ ಇಂಡಿಯಾಗೆ ಅಡಿಪಾಯ ಹಾಕಿದ್ದು ರಾಜೀವ್ ಗಾಂಧಿ. ಬಿಜೆಪಿ ನಾಯಕರು ಸುಳ್ಳನ್ನು ತಲೆಗೆ ಹೊಡೆದ ಹಾಗೆ ಹೇಳುತ್ತಾರೆ‌. ಅವರ ಸುಳ್ಳು ಬಯಲು ಮಾಡುವ ಕೆಲಸ ಮಾಡಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ದೇಶ ಬಹುತ್ವ ಸಂಸ್ಕೃತಿ ಹೊಂದಿದೆ. ಆದರೆ ಬಿಜೆಪಿ ಜನರಲ್ಲಿ ವಿಷಬೀಜ ಬಿತ್ತುತ್ತದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರನ್ನೂ ಜೊತೆಗೆ ಕೊಂಡೊಯ್ಯಬೇಕು. ಆದರೆ ಬಿಜೆಪಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂದು ಮಾತ್ರ ಹೇಳುತ್ತದೆ ಎಂದು ವಾಗ್ದಾಳಿ ನಡೆಸಿದರು.

Loading

Leave a Reply

Your email address will not be published. Required fields are marked *