ಕೋಲ್ಕತ್ತಾ: ಡಿಸೆಂಬರ್ʼನಲ್ಲಿ ಬಿಜೆಪಿ (BJP) ಲೋಕಸಭೆ ಚುನಾವಣೆಯನ್ನು (Lok Sabha) ನಡೆಸಬಹುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಭವಿಷ್ಯ ನುಡಿದಿದ್ದಾರೆ. ಟಿಎಂಸಿ (TMC) ಯುವ ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ದೇಶವು ನಿರಂಕುಶ ಆಡಳಿತವನ್ನು ಎದುರಿಸಬೇಕಾಗುತ್ತದೆ. ಡಿಸೆಂಬರ್ನಲ್ಲಿ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಲೋಕಸಭೆ ಚುನಾವಣೆಯನ್ನು ನಡೆಸಬಹುದು ಎಂದು ನಾನು ಆತಂಕಗೊಂಡಿದ್ದೇನೆ ಎಂದು ಅವರು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಬಿಜೆಪಿ ಈಗಾಗಲೇ ಎಲ್ಲಾ ಹೆಲಿಕಾಪ್ಟರ್ಗಳನ್ನು (Choppers) ಕಾಯ್ದಿರಿಸಿದೆ. ಯಾವುದೇ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಅವುಗಳನ್ನು ಬಳಸಬಾರದು ಎಂದರು. ಕೇಸರಿ ಪಕ್ಷವು ಈಗಾಗಲೇ ನಮ್ಮ ದೇಶವನ್ನು ಸಮುದಾಯಗಳ ನಡುವಿನ ವೈರತ್ವದ ರಾಷ್ಟ್ರವಾಗಿ ಪರಿವರ್ತಿಸಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅದು ನಮ್ಮ ದೇಶವನ್ನು ದ್ವೇಷದ ರಾಷ್ಟ್ರವನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ ಕುರಿತು ಮಾತನಾಡಿದ ಅವರು ಕೆಲವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಕೃತ್ಯಕ್ಕೆ ಕೆಲ ಪೊಲೀಸ್ ಸಿಬ್ಬಂದಿ ಸಹಕರಿಸುತ್ತಿದ್ದಾರೆ ಎಂದು ಹೇಳಿದರು.