ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ನಲ್ಲಿ ಉಗ್ರರು ಹಾಗೂ ಸೇನಾ ಪಡೆಗಳ ನಡುವೆ ಬುಧವಾರ ಆರಂಭಗೊಂಡಿರುವ ಗುಂಡಿನ ಚಕಮಕಿ ಇಂದು ಮುಂದುವರಿದಿದೆ. ದಾಳಿಯಲ್ಲಿ ಇಂದು ಯೋಧರೊಬ್ಬರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೂ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಲ್ ಮನ್ಪ್ರೀತ್ ಸಿಂಗ್, ಮೇಜರ್ ಆಶಿಶ್ ಮತ್ತು ಡಿಎಸ್ಪಿ ಹುಮಾಯೂನ್ ಭಟ್ ಸೇರಿದಂತೆ ಮೂವರು ಅಧಿಕಾರಿಗಳು ಸಾವನ್ನಪ್ಪಿದ್ದರು. ಇಂದು ಮೃತಪಟ್ಟ ನಾಲ್ಕನೇ ಯೋಧನ ಗುರುತು ಇನ್ನೂ ಬಹಿರಂಗವಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.
ಅನಂತನಾಗ್ನ ಕೋಕರ್ನಾಗ್ ಅರಣ್ಯ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ. ಭಯೋತ್ಪಾದಕರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಶುಕ್ರವಾರ ಬೆಳಗ್ಗೆ ಅರಣ್ಯ ಪ್ರದೇಶದಿಂದ ಭಾರೀ ಸ್ಫೋಟಗಳು ಮತ್ತು ಭಾರೀ ಗುಂಡಿನ ಸದ್ದು ಕೇಳಿಬಂದಿತ್ತು. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ನಿರ್ದಿಷ್ಟವಾಗಿ ಎಷ್ಟು ಜನ ಉಗ್ರರು ಅಡಗಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಅವರ ಪತ್ತೆಗಾಗಿ ಡ್ರೋನ್ಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.