ಧಾರವಾಡ: ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆಗೆ ಯಾವುದೇ ಸಮಸ್ಯೆಯಿಲ್ಲ. ಯೋಜನೆ ಯಶಸ್ಸಿಗೆ ಹಣಕಾಶಿನ ತೊಂದರೆ ಇಲ್ಲ. ತಾಂತ್ರಿಕ ಸಮಸ್ಯೆ ಇದೆ ಅದನ್ನು ಈಗಾಗಲೇ ಫೈಂಡೌಟ್ ಮಾಡಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಧಾರವಾಡದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಹಣವನ್ನು ತೆಗೆದು ಇಟ್ಟಿದೆ. ನಾವು ಯಾವುದೇ ಅಭಿವೃದ್ಧಿ ಕೆಲಸ ತಡೆ ಮಾಡಿಲ್ಲ. ಗೃಹ ಲಕ್ಷ್ಮೀ ಯೋಜನೆಗೆ ಹಣಕಾಸಿನ ತೊಂದರೆ ಇದೆ ಅನ್ನುವುದು ಸುಳ್ಳು. ಗೃಹ ಲಕ್ಷ್ಮೀಯಲ್ಲಿ ಈಗಾಗಲೇ 1 ಕೋಟಿ 9 ಲಕ್ಷ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗಿದೆ. ಇನ್ನೂ 5 ರಿಂದ 6 ಲಕ್ಷ ಜನ ಉಳಿದುಕೊಂಡಿದ್ದಾರೆ. ಅವರದ್ದು ಸಹ ಇನ್ನೂ 15 ದಿನಗಳಲ್ಲಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗೃಹಲಕ್ಷ್ಮೀ ಒಂದೇ ಅಲ್ಲ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ತೆಗೆದಿಟ್ಟಿದ್ದಾರೆ. ಹಿಂದಿನ ಸರ್ಕಾರದಲ್ಲಿ ಯದ್ವಾ ತದ್ವಾ ಟೆಂಡರ್ ಪ್ರಕ್ರಿಯೆ ನಡೆದಿರುವುದು ಒಂದು ಇಲಾಖೆಗೆ 2 ಸಾವಿರ ಕೋಟಿ ಕೊಡಬೇಕಿತ್ತು. ಸಣ್ಣ ನೀರಾವರಿ ಇಲಾಖೆ ಉದಾಹರಣೆಗೆ ತೆಗೆದುಕೊಂಡರೆ ಈ ಇಲಾಖೆಯಿಂದ 2 ಸಾವಿರ ಕೋಟಿ ಕೆಲಸ ತೆಗೆದುಕೊಳ್ಳಬಹುದು. 2022ರ ಅವಧಿಗೆ 1350 ಕೋಟಿ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರೆ. ವರ್ಕ್ ಆರ್ಡರ್ ಆಗಿದೆ. ಟೆಂಡರ್ ಪ್ರಕ್ರಿಯೆ, ಕೆಲಸ ಆಗಿದೆ. ಇಲಾಖೆಯ ಬಿಲ್ ಬಿಡುಗಡೆ ಬಾಕಿಯಿದೆ. 22 ಸಾವಿರ ಕೋಟಿ ಹಿಂದಿನ ಸರ್ಕಾರದ ಬಿಲ್ ಬಾಕಿಯಿದೆ. ಅಭಿವೃದ್ಧಿ ಬಗ್ಗೆ ಕೇಳುವವರು ಮಾಡಿದ್ದು ಏನು..?. ಅವರು ಮಾಡಿರುವ ತಪ್ಪುಗಳನ್ನು ನಾವಿ ಈಗ ಸರಿ ಪಡಿಸುವ ಕೆಲಸ ಮಾಡುತ್ತಿದ್ದೇವೆ ಎನ್ನುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.