ಪ್ರತಿಭಟನೆ ನಿರತ ರೈತರೊಂದಿಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ: ಅರ್ಜುನ್‌ ಮುಂಡಾ

ನವದೆಹಲಿ: ಉತ್ತರ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ರೈತರೊಂದಿಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ (Arjun Munda) ಹೇಳಿದ್ದಾರೆ. ಅಲ್ಲದೇ ಚರ್ಚೆಗೆ ಯೋಗ್ಯವಾದ ವಾತಾವರಣವನ್ನು ರೈತರು ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ (New Delhi) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾವು ಚರ್ಚೆಗೆ ಸಿದ್ಧರಿದ್ದೇವೆ. ನಾವು ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮಾತುಕತೆ ನಡೆಸಬೇಕಾಗಿದೆ ಎಂದು ಹೇಳಿದರು. ಚರ್ಚೆಯ ವಾತಾವರಣವನ್ನು ಕಾಪಾಡಿಕೊಳ್ಳಲು ರೈತ ಸಂಘವನ್ನು ನಾನು ವಿನಂತಿಸುತ್ತೇನೆ. ರೈತರ ಸಂಘದೊಂದಿಗೆ ಸಕಾರಾತ್ಮಕ ಚರ್ಚೆ ನಡೆಸುವ ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಹೇಳಿದರು.

ರೈತರು ದೆಹಲಿಗೆ ತೆರಳಲು ಉದ್ದೇಶಿಸಿರುವ ದೆಹಲಿ ಚಲೋ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪೊಲೀಸರು ಹಲವಾರು ಪದರಗಳ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದರಿಂದ ದೆಹಲಿಯ ಗಡಿ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಹರಿಯಾಣದ ಸಿಂಘು ಮತ್ತು ಟಿಕ್ರಿ ಗಡಿಗಳು ಸಂಚಾರಕ್ಕಾಗಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದರೂ, ಗಾಜಿಪುರ ಗಡಿಯಲ್ಲಿ ವಾಹನ ಸಂಚಾರವನ್ನು ನಿಯಂತ್ರಿತ ರೀತಿಯಲ್ಲಿ ಅನುಮತಿಸಲಾಗಿದೆ.

ದೆಹಲಿಗೆ ರೈತರ ಪಾದಯಾತ್ರೆಯನ್ನು ತಡೆಯಲು ಸಿಂಘು ಗಡಿಯ ಸಮೀಪವಿರುವ ಹಳ್ಳಿಯೊಂದರಲ್ಲಿ ರಸ್ತೆಯ ಒಂದು ಭಾಗವನ್ನು ಅಗೆಯಲಾಯಿತು. ತಮ್ಮ ಬೇಡಿಕೆಗಳ ಕುರಿತು ಕೇಂದ್ರ ಸಚಿವರ ತಂಡದೊಂದಿಗೆ ನಡೆಸಿದ ಸಭೆ ವಿಫಲವಾದ ನಂತರ ಕನಿಷ್ಠ ಬೆಂಬಲ ಬೆಲೆಯ ಕಾನೂನಿಗೆ ಒತ್ತಾಯಿಸಿ ರೈತರು ದೆಹಲಿಯತ್ತ ಪಾದಯಾತ್ರೆ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ಪ್ರಯತ್ನಿಸುತ್ತಿದ್ದಾರೆ.

Loading

Leave a Reply

Your email address will not be published. Required fields are marked *