ನವದೆಹಲಿ: ಗೂಗಲ್ (Google) ಕಂಪನಿಯೂ ತನ್ನ ಪಿಕ್ಸೆಲ್ (Pixel) ಸ್ಮಾರ್ಟ್‌ಫೋನ್‌ಗಳನ್ನು (Smartphone) ಮುಂದಿನ ತ್ರೈಮಾಸಿಕದಿಂದ ಭಾರತದಲ್ಲಿ (India) ತಯಾರಿಸಲಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ದುಬಾರಿ ಫೋನುಗಳ ಮಾರಾಟ ಏರಿಕೆಯಾಗುತ್ತಿರುವ ಬೆನ್ನಲ್ಲೇ ಈಗ ಗೂಗಲ್ ಪಿಕ್ಸೆಲ್ ಫೋನ್‌ಗಳನ್ನು ಭಾರತದಲ್ಲಿ ಉತ್ಪಾದನೆ ಮಾಡಲು ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕಳೆದ ವರ್ಷದ ಗೂಗಲ್ ಫಾರ್ ಇಂಡಿಯಾ ಈವೆಂಟ್‌ನಲ್ಲಿ ಭಾರತದಲ್ಲಿ ಫೋನ್ ಉತ್ಪಾದನೆ ಮಾಡುವ ಯೋಜನೆ ಪ್ರಕಟಿಸಿತ್ತು. ವರದಿ ಪ್ರಕಾರ ಪಿಕ್ಸೆಲ್ ಮಾದರಿಯಲ್ಲಿ ಹೈ ಎಂಡ್ ಫೋನ್ ಆಗಿರುವ ಪಿಕ್ಸೆಲ್ 8 ಪ್ರೊ ಭಾರತದಲ್ಲಿ ಉತ್ಪಾದನೆಯಾಗುವ ಮೊದಲ ಫೋನ್ ಎನ್ನಲಾಗುತ್ತಿದೆ. ಗೂಗಲ್‌ನ ಇಂಡಿಯಾದ ಪಿಕ್ಸೆಲ್ ಫೋನ್ ಉತ್ಪಾದನೆಯು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದೆ. ಈ ಮೊದಲು ಚೀನಾದಲ್ಲಿ ಪಿಕ್ಸೆಲ್ ಫೋನ್ ತಯಾರಾಗುತ್ತಿತ್ತು. ಅಮೆರಿಕ (USA) ಮತ್ತು ಚೀನಾ (China) ನಡುವೆ ನಡೆಯುತ್ತಿರುವ ತಾಂತ್ರಿಕ ಯುದ್ಧದ ನಂತರ ಗೂಗಲ್ ವಿಯೆಟ್ನಾಂನಲ್ಲಿ ಫೋನ್ ತಯಾರಿಸುತ್ತಿತ್ತು.
ಭಾರತದಲ್ಲಿ ತಯಾರಾಗಲಿರುವ ಫೋನುಗಳನ್ನು ದೇಶದ ಒಳಗಡೆ ಮಾರಾಟ ಮಾಡುತ್ತದೋ ಅಥವಾ ವಿದೇಶಕ್ಕೆ ರಫ್ತು ಮಾಡುತ್ತದೋ ಎನ್ನುವುದು ತಿಳಿದು ಬಂದಿಲ್ಲ.