ತಿರುವನಂತಪುರಂ: ಪ್ರಸಿದ್ಧ ಗುರುವಾಯೂರು ದೇಗುಲಕ್ಕೆ ಚಿನ್ನದ ಕಿರೀಟವನ್ನು ನೀಡುತ್ತಿರುವ ಮೂಲಕ ಇದೀಗ ಎಲ್ಲರ ಗಮನಸೆಳೆದಿದ್ದಾರೆ. ಕೊಯಮತ್ತೂರಿನಲ್ಲಿ ಚಿನ್ನದ ಉದ್ಯಮ ನಡೆಸುತ್ತಿರುವ ತ್ರಿಶೂರ್ ಮೂಲದ ಕೆ.ವಿ ರಾಜೇಶ್ ಆಚಾರ್ಯ ತನ್ನ ಹುಟ್ಟುಹಬ್ಬದ ದಿನದಂದು ಈ ಉಡುಗೊರೆಯನ್ನು ನೀಡಲಿದ್ದಾರೆ. ಸೆಪ್ಟೆಂಬರ್ 6ರ ಬುಧವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಇದೆ. ಅದೇ ದಿನ ದೇವರಿಗೆ 38 ಪವನ್ ನ ಈ ಚಿನ್ನದ ಕಿರೀಟವನ್ನು ಧರಿಸಲಾಗುತ್ತದೆ. ಜನ್ಮಾಷ್ಟಮಿ ದಿನ ಕಾಣಿಕೆಯಾಗಿ ಸ್ವೀಕರಿಸಿದ ವಸ್ತುಗಳನ್ನು ವಿಗ್ರಹದ ಮೇಲೆ ಧರಿಸಲಾಗುತ್ತದೆ.
ನಂತರ ದೇವಸ್ವಂನ ರಿಜಿಸ್ಟರ್ ನಲ್ಲಿ ದಾಖಲಿಸಲಾಗುತ್ತದೆ ಮತ್ತು ಸುರಕ್ಷಿತ ಲಾಕರ್ ಗೆ ವರ್ಗಾಯಿಸಲಾಗುತ್ತದೆ. ಕಳೆದ ತಿಂಗಳು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು ಗುರುವಾಯೂರಪ್ಪನವರಿಗೆ 14 ಲಕ್ಷ ಮೌಲ್ಯದ ಚಿನ್ನದ ಕಿರೀಟವನ್ನು ಅರ್ಪಿಸಿದ್ದರು. ಜೊತೆಗೆ ಶ್ರೀಗಂಧವನ್ನು ಅರೆಯುವ ಅಂದಾಜು 2 ಲಕ್ಷ ಮೌಲ್ಯದ ಯಂತ್ರವನ್ನೂ ದೇಗುಲಕ್ಕೆ ದಾನ ಮಾಡಿದ್ದರು. ಇನ್ನು ಉದ್ಯಮಿ ಡಾ. ರವಿ ಪಿಳ್ಳೈ ಅವರು 2021ರ ಸೆಪ್ಟೆಂಬರ್ನಲ್ಲಿ 725 ಗ್ರಾಂ. ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು.