ಜೋಧ್‌ಪುರ: 17 ವರ್ಷದ ಹುಡುಗಿಯೊಬ್ಬಳನ್ನು ಆಕೆಯ ಬಾಯ್‌ಫ್ರೆಂಡ್ ಎದುರೇ ಮೂವರು ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಹೇಯ ಕೃತ್ಯ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ. ಯುವತಿಯ ಬಾಯ್‌ಫ್ರೆಂಡ್‌ಗೆ ಮೊದಲಿಗೆ ಸರಿಯಾಗಿ ಥಳಿಸಿದ ಮೂವರು ವಿದ್ಯಾರ್ಥಿಗಳು ಬಳಿಕ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ.
ಭಾನುವಾರ ಮುಂಜಾನೆ 4 ಗಂಟೆ ವೇಳೆ ಈ ಘಟನೆ ನಡೆದಿದೆ. ಅತ್ಯಾಚಾರವೆಸಗಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
17 ವರ್ಷದ ಹುಡುಗಿ ಅಜ್ಮೀರ್ ನಿವಾಸಿಯಾಗಿದ್ದು, ಅಪ್ರಾಪ್ತ ಗೆಳೆಯನ ಜೊತೆ ಭಾನುವಾರ ಮನೆಬಿಟ್ಟು ಓಡಿ ಬಂದಿದ್ದಳು. ಇಬ್ಬರು ಬಸ್‌ನಲ್ಲಿ ಅಜ್ಮೀರ್‌ನಿಂದ ಜೋಧ್‌ಪುರಕ್ಕೆ ಬಂದಿದ್ದು, ಉಳಿಯುವುದಕ್ಕಾಗಿ ಬಸ್ ನಿಲ್ದಾಣದ ಸಮೀಪ ಸ್ಥಳ ಹುಡುಕಾಡುತ್ತಿದ್ದಾಗ ಈ ದುರುಳರ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಇವರಿಗೆ ರಾತ್ರಿ ಉಳಿಯಲು ಸ್ಥಳ ಸಿಗದ ಹಿನ್ನೆಲೆಯಲ್ಲಿ ಪವಟ ಸರ್ಕಲ್ ಬಳಿ ಮಾರ್ಗದಲ್ಲಿ ಅಲೆದಾಡುತ್ತಿರಬೇಕಾದರೆ ಈ ಮೂವರು ಖದೀಮರು ಈ ಜೋಡಿಯನ್ನು ಗಮನಿಸಿ ಹತ್ತಿರ ಬಂದು ಸಹಾಯ ಮಾಡುವುದಾಗಿ ಹೇಳಿದ್ದಾರೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ಅಮ್ರಿತ್ ದುಹನ್ ಹೇಳಿದ್ದಾರೆ.