ನವದೆಹಲಿ: ಸೆ.9 ಹಾಗೂ 10 ರಂದು ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ (G20) ವಿದೇಶಿ ಗಣ್ಯರ ಆಗಮನಕ್ಕಾಗಿ ವಿಮಾನ ನಿಲ್ದಾಣಗಳಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಭಾಗವಾಗಿ ಹಿಂಡನ್ ಏರ್ಬೇಸ್ನಲ್ಲಿ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಬಹುಮಹಡಿ ಕಟ್ಟಡಗಳ ಮೇಲೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿನಿಧಿಗಳ ಆಗಮನದ ಸಮಯದಲ್ಲಿ ಟೆರೇಸ್ಗಳ ಮೇಲೆ ಬಾರದಂತೆ ಹತ್ತಿರದ ಹಳ್ಳಿಗಳ ನಿವಾಸಿಗಳಿಗೆ ತಿಳಿಸಲಾಗಿದೆ. ಸೂಕ್ತ ಭದ್ರತೆ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಶುಭಂ ಪಟೇಲ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣದಿಂದ ದೆಹಲಿಯ (Delhi) ಗಡಿಯವರೆಗೆ ವಿದೇಶಿ ಪ್ರತಿನಿಧಿಗಳ ಭದ್ರತೆಯನ್ನು ನೋಡಿಕೊಳ್ಳಲು ಸಿವಿಲ್ ಮತ್ತು ಟ್ರಾಫಿಕ್ ಪೊಲೀಸರಿಂದ ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗುರುವಾರ ಸಂಜೆಯಿಂದ ದೆಹಲಿ ಪ್ರವೇಶಿಸಲು ಯಾವುದೇ ಭಾರೀ ವಾಹನಗಳಿಗೆ ಅನುಮತಿ ಇರುವುದಿಲ್ಲ. ಜಿ20 ಶೃಂಗಸಭೆಯ ಕೊನೆಯವರೆಗೂ ಈ ನಿಯಮ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಗಾಜಿಯಾಬಾದ್ನಿಂದ ದೆಹಲಿಗೆ ಪ್ರತಿನಿಧಿಗಳ ಹೊರಡುವ ಸಮಯದಲ್ಲಿ ಲಘು ಮೋಟಾರು ವಾಹನಗಳಿಗೂ ದೆಹಲಿಯ ಕಡೆಗೆ ಸಂಚರಿಸಲು ಅನುಮತಿಸಲಾಗುವುದಿಲ್ಲ. ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಸಹಾಯವನ್ನು ಪಡೆಯಬಹುದಾಗಿದೆ. ಆದೇಶಗಳನ್ನು ಉಲ್ಲಂಘಿಸದಂತೆ ಸ್ಥಳೀಯರಿಗೆ ನೋಟಿಸ್ ನೀಡಿ ಎಚ್ಚರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.