ರಿಯಾಲಿಟಿ ಶೋಗಳ ನಿರೂಪಣೆ ಹಾಗೂ ನಟನೆಯ ಮೂಲಕ ಖ್ಯಾತಿ ಘಳಿಸಿರುವ ಮಾಸ್ಟರ್ ಆನಂದ್ ಪುತ್ರ ವಂಶಿಕಾ ಹೆಸರು ಬಳಸಿ ಮಹಿಳೆಯೊಬ್ಬರು 40 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆಂದು ಆರೋಪ ಕೇಳಿ ಬಂದಿದೆ. ನಿಶಾ ಎಂಬ ಮಹಿಳೆಯಿಂದ ವಂಚನೆಯಾಗಿದ್ದು ಇದೀಗ ನಿಶಾ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಇದೀಗ ನಿಶಾ ಅವರನ್ನು ಬಂಧಿಸಲಾಗಿದೆ.
ಮಕ್ಕಳ ಟ್ಯಾಲೆಂಟ್ ಶೋ, ಮಕ್ಕಳ ಮಾಡೆಲಿಂಗ್, ಇವೆಂಟ್ ಮ್ಯಾನೇಜ್ಮೆಂಟ್, ಮಕ್ಕಳ ಗ್ರೂಮಿಂಗ್ ತರಗತಿ ಇತ್ಯಾದಿ ನಡೆಸುತ್ತೇನೆ ಎಂದು ಹೇಳಿ ಮಕ್ಕಳ ಪೋಷಕರಿಂದ ಲಕ್ಷಾಂತರ ಹಣವನ್ನು ನಿಶಾ ವಸೂಲಿ ಮಾಡಿದ್ದಾರೆ ಎನ್ನಲಾಗುತ್ತಿದೆ. ನಿಶಾರಿಂದ ಹಣ ಪಡೆದು ಮೋಸ ಹೋದ ಕೆಲವರು ನಿಶಾರ ವಿರುದ್ಧ ದೂರು ನೀಡಿರುವುದಲ್ಲದೆ ಫೇಸ್ಬುಕ್ನಲ್ಲಿಯೂ ಈ ಬಗ್ಗೆ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಮಾಸ್ಟರ್ ಆನಂದ್ರ ಪುತ್ರಿ ವಂಶಿಕಾ ಹೆಸರು ಹೇಳಿಕೊಂಡು ಹಲವರಿಗೆ ಮೋಸ ಮಾಡಿದ್ದಾರಂತೆ ನಿಶಾ ನರಸಪ್ಪ. ವಂಶಿಕಾ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಮಾರು 40 ಲಕ್ಷ ರೂಪಾಯಿ ಹಣವನ್ನು ನಿಶಾ ವಸೂಲಿ ಮಾಡಿದ್ದರಂತೆ. ಈ ಬಗ್ಗೆ ಹಣ ಕಳೆದುಕೊಂಡವರು ಹಾಗೂ ವಂಶಿಕಾರ ತಾಯಿ ಯಶಸ್ವಿನಿ ಆನಂದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿಶಾರ ಫೇಸ್ಬುಕ್ ಪೋಸ್ಟ್ನ ಕಮೆಂಟ್ಗಳಲ್ಲಿಯೂ ಕೆಲವು ಹಣ ಕಳೆದುಕೊಂಡ ಸಂತ್ರಸ್ತರು ನಿಶಾ ವಿರುದ್ಧ ಅವರು ಮಾಡಿರುವ ಮೋಸಗಳ ಬಗ್ಗೆ ಬರೆದಿದ್ದಾರೆ. ಈ ಹಿಂದೆ ಪೂರ್ಣಿಮಾ ಎಂಬುವರಿಂದ ಮಕ್ಕಳ ಫ್ಯಾಷನ್ ಶೋ ನಡೆಸುತ್ತಿರುವುದಾಗಿ ಹೇಳಿ ಶ್ವೇತಾ ಶ್ರೀವತ್ಸಾಗೆ 50 ಸಾವಿರ ಹಣ ಕೊಟ್ಟರೆ ನಿಮ್ಮ ಮಗಳಿಗೆ ಮೊದಲ ಬಹುಮಾನ ಬರುವಂತೆ ಮಾಡುತ್ತೇನೆಂದು ಹೇಳಿ ಹಣ ಪಡೆದಿದ್ದರಂತೆ. ಈ ಕುರಿತಾಗಿ ನಿಶಾ ವಾಟ್ಸ್ಆಪ್ ಮೆಸೇಜ್ ಮಾಡಿದ್ದ ಸ್ಕ್ರೀನ್ಶಾಟ್ಗಳನ್ನು ಪೂರ್ಣಿಮಾ ಹಂಚಿಕೊಂಡಿದ್ದಾರೆ. ಅಲ್ಲದೆ, ನಿಶಾಗೆ ಬೇಬಿ ಮಾಡೆಲಿಂಗ್ಗಾಗಿ 10 ಲಕ್ಷ ಹಣ ಕೊಟ್ಟು ಹಣ ಕಳೆದುಕೊಂಡಿರುವ ಬಗ್ಗೆ ನೀಡಿರುವ ದೂರಿನ ಪ್ರತಿಯನ್ನು ಸಹ ಪೂರ್ಣಿಮಾ ಎಂಬುವರು ಹಂಚಿಕೊಂಡಿದ್ದಾರೆ.
ನಿಶಾ ನರಸಪ್ಪಗೆ ವಂಚನೆಯೇ ಉದ್ಯೋಗವಾಗಿತ್ತು. ವಂಶಿಕಾ ಮಾತ್ರವೇ ಅಲ್ಲದೆ ಚಿತ್ರರಂಗದ ಹಲವರ ಹೆಸರಿನಲ್ಲಿ ಹಣ ಹಲವರಿಂದ ಹಣ ಪಡೆದಿದ್ದ ನಿಶಾ ಆ ನಂತರ ಹಣ ಪಡೆದವರ ಕರೆಗಳನ್ನು ರಿಸೀವ್ ಮಾಡುತ್ತಿರಲಿಲ್ಲವಂತೆ, ಕರೆ ಮಾಡಿದರೂ ದರ್ಪದಿಂದ ಮಾತನಾಡುತ್ತಿದ್ದರಂತೆ. ಹೀಗೆ ವಂಚನೆ ಹಣದಿಂದಲೇ ಐಶಾರಾಮಿ ಜೀವನವನ್ನು ನಿಶಾ ನರಸಪ್ಪ ಅವರನ್ನು ಇದೀಗ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.