ಸೆಲೆಬ್ರಿಟಿಗಳ ಹೆಸರಲ್ಲಿ ವಂಚನೆ ಎಸಗುವುದು ಕಾಮನ್ ಆಗಿದೆ. ನಟ, ನಟಿಯರು, ರಾಜಕಾರಣಿಗಳ ಹೆಸರು ಬಳಸಿಕೊಂಡು ಸಾಕಷ್ಟು ಮಂದಿ ಕೋಟಿ ಕೋಟಿ ಪೀಕಿದ್ದಾರೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಹೆಸರು ಬಳಸಿಕೊಂಡು ವಂಚನೆ ಎಸಗಲಾಗಿದ್ದು ಈ ಬಗ್ಗೆ ಸ್ವತಃ ನಟ ಸಲ್ಮಾನ್ ಖಾನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸಲ್ಮಾನ್ ಖಾನ್ ನಿರ್ಮಾಣ ಸಂಸ್ಥೆಯಿಂದ ತಯಾರಾಗುವ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಮತ್ತು ಅವರ ಕಂಪೆನಿಯ ಹೆಸರಿನಲ್ಲಿ ಬೇರೆಯವರು ಆಡಿಷನ್ ಮಾಡಿ ಹಣ ಪಡೆಯಲಾಗುತ್ತಿದೆ ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ. ಜೊತೆಗೆ ಇದರ ಬಗ್ಗೆ ಎಚ್ಚರದಿಂದಿರುವಂತೆ ಹಾಗೂ ಯಾರು ಕೂಡ ಮೋಸ ಹೋಗದಂತೆ ಸಲ್ಲು ಬಾಯ್ ಮನವಿ ಮಾಡಿದ್ದಾರೆ.
ನಮ್ಮ ಸಂಸ್ಥೆಯಿಂದ ಯಾವುದೇ ಹೊಸ ಸಿನಿಮಾ ಮಾಡುತ್ತಿಲ್ಲ ಮತ್ತು ಸಿನಿಮಾದ ಹೆಸರಿನಲ್ಲಿ ಆಡಿಷನ್ ಕೂಡ ನಡೆಯುತ್ತಿಲ್ಲ. ಕಾಸ್ಟಿಂಗ್ ಡೈರೆಕ್ಟರ್ ಅಥವಾ ಕಾಸ್ಟಿಂಗ್ ಮಾಡಲು ಯಾವುದೇ ಏಜೆನ್ಸಿಗೆ ನಾವು ಅನುಮತಿಯನ್ನೂ ನೀಡಿಲ್ಲ. ಯಾರಾದರೂ ಇ-ಮೇಲ್ ಮಾಡಿದರೆ ಅಥವಾ ಮಸೇಜ್ ಕಳುಹಿಸಿದರೆ, ಯಾರು ರಿಯ್ಯಾಕ್ಟ್ ಮಾಡಬೇಡಿ. ಅಂಥವರ ವಿರುದ್ಧ ದೂರು ನೀಡಿ ಎಂದು ಬರೆದುಕೊಂಡಿದ್ದಾರೆ.