ಸಿಕ್ಕಿಂನಲ್ಲಿ ಹಠಾತ್ ಪ್ರವಾಹ: 14 ಜನರು ಸಾವು -102 ಮಂದಿ ನಾಪತ್ತೆ

ಗ್ಯಾಂಗ್ಟಾಕ್: ಸಿಕ್ಕಿಂನಲ್ಲಿ (Sikkim) ಮುಂಜಾನೆ ಸಂಭವಿಸಿದ ಹಠಾತ್ ಪ್ರವಾಹದಲ್ಲಿ (Flood) ಇದುವರೆಗೆ 14 ಜನರು ಸಾವನ್ನಪ್ಪಿದ್ದಾರೆ. 102 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಿಕ್ಕಿಂ ಸರ್ಕಾರ ತಿಳಿಸಿದೆ. ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ 3,000 ಪ್ರವಾಸಿಗರು ಸಿಲುಕಿರುವ ಆತಂಕ ವ್ಯಕ್ತವಾಗಿದೆ. ವಾಯುವ್ಯ ಸಿಕ್ಕಿಂನಲ್ಲಿರುವ ಸೌತ್ ಲೊನಾಕ್ ಸರೋವರದಲ್ಲಿ ಬುಧವಾರ ಬೆಳಗ್ಗೆ ಸುರಿದ ನಿರಂತರ ಮಳೆಗೆ ಮೇಘಸ್ಫೋಟ (Cloudburst) ಉಂಟಾಗಿದೆ. ಇದರಿಂದ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಯಿತು. ಇದರಿಂದಾಗಿ ಸಿಂಗ್ಟಾಮ್ ಪಟ್ಟಣದ ತೀಸ್ತಾ ನದಿಯ ಇಂದ್ರೇಣಿ ಸೇತುವೆ ಮೂಲಕ ಪ್ರವಾಹ ಸಾಗಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಲೂಟಾರ್ ಕುಗ್ರಾಮದ ಮತ್ತೊಂದು ಸಂಪರ್ಕ ಸೇತುವೆ ಕೂಡ ಕೊಚ್ಚಿ ಹೋಗಿದೆ.

ಸಿಕ್ಕಿಂ ಮುಖ್ಯ ಕಾರ್ಯದರ್ಶಿ ವಿಬಿ ಪಾಠಕ್ ಅವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಲೊನಾಕ್ ಸರೋವರದಲ್ಲಿ ಮಂಗಳವಾರ ರಾತ್ರಿ 10:42 ರ ಸುಮಾರಿಗೆ ಮೇಘಸ್ಫೋಟ ಉಂಟಾಗಿದೆ. ನಂತರ ಸರೋವರ ಅದರ ದಂಡೆಯನ್ನು ಭೇದಿಸಿ ತೀಸ್ತಾ ನದಿಯ ಕಡೆಗೆ ಪ್ರವಾಹ ರೂಪದಲ್ಲಿ ಸಾಗಿದೆ. ಶೀಘ್ರವೇ ತೀಸ್ತಾ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆ ವರದಿಯಾಗಿದೆ. ವಿಶೇಷವಾಗಿ ಚುಂಗ್ಥಾಂಗ್ನಲ್ಲಿ ತೀಸ್ತಾ ಸ್ಟೇಜ್ 3 ಅಣೆಕಟ್ಟು ಒಡೆದು ಆತಂಕ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ. ಚುಂಗ್ಥಾಂಗ್ನ ತೀಸ್ತಾ ಸ್ಟೇಜ್ 3 ಅಣೆಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ 12-14 ಕಾರ್ಮಿಕರು ಇನ್ನೂ ಅಲ್ಲಿನ ಸುರಂಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಮಂಗನ್ ಜಿಲ್ಲೆಯ ಚುಂಗ್ತಾಂಗ್ ಮತ್ತು ಗ್ಯಾಂಗ್ಟಾಕ್ ಜಿಲ್ಲೆಯ ಡಿಕ್ಚು, ಸಿಂಗ್ಟಾಮ್ ಮತ್ತು ಪಾಕ್ಯೊಂಗ್ ಜಿಲ್ಲೆಯ ರಂಗ್ಪೋದಿಂದ ಹಲವರು ನಾಪತ್ತೆಯಾಗಿದ್ದಾರೆ ಹಾಗೂ ಹೆಚ್ಚಿನವರಿಗೆ ಗಾಯಗಳಾಗಿವೆ.

Loading

Leave a Reply

Your email address will not be published. Required fields are marked *