ಸಿನಿಮಾ ರಂಗಕ್ಕೆ ಮತ್ತೊಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿನ ಬೆನ್ನಲ್ಲೇ ಮತ್ತೊಂದು ನಟಿ ಸಾವನ್ನಪ್ಪಿದ್ದಾರೆ. ಹೌದು ಸಿನಿಮಾ ಮತ್ತು ಕಿರುತೆರೆಯಲ್ಲಿ ನಟಿಸುತ್ತಾ ಬಂದಿದ್ದ ನಟಿ ಅಪರ್ಣಾ ನಾಯರ್ ಅವರು ನಿಧನರಾಗಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಅಪರ್ಣಾ ನಾಯರ್ ಅವರ ಶವ ಪತ್ತೆ ಆಗಿದೆ. ಮಲಯಾಳಂ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಪರ್ಣಾ ನಾಯರ್ ಅವರು ಸಕ್ರಿಯರಾಗಿದ್ದರು. ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
ಅಪರ್ಣಾ ನಾಯರ್ ಅವರು ತಿರುವನಂತಪುರಂನಲ್ಲಿ ವಾಸವಾಗಿದ್ದರು. ಅವರಿಗೆ 31 ವರ್ಷ ವಯಸ್ಸಾಗಿತ್ತು. ಗುರುವಾರ ಸಂಜೆ 7.30ರ ಸುಮಾರಿಗೆ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಗೊತ್ತಾಗಿದೆ. ಈ ವೇಳೆ ಮನೆಯಲ್ಲಿ ಅವರ ತಾಯಿ ಮತ್ತು ಸಹೋದರಿ ಇದ್ದರು ಎಂದು ಹೇಳಲಾಗಿದೆ. ಕೂಡಲೇ ಅಪರ್ಣಾ ನಾಯರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ಅವರು ಕೊನೆಯುಸಿರು ಎಳೆದಿದ್ದರು ಎಂದು ವರದಿ ಆಗಿದೆ.