ಮಂಡ್ಯ : ಮಂಡ್ಯದಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮಂಡ್ಯದ ಹುಳ್ಳೇನಹಳ್ಳಿ ಸಮೀಪದ ಆಲೆಮನೆಯಲ್ಲಿ ನಡೆದ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಜಾಲದ ಪ್ರಕರಣ ತೀವ್ರ ಆಘಾತ ಮೂಡಿಸಿದೆ ಎಂದು ಬೇಸರಿಸಿದ್ದಾರೆ.
ಸಮಾಜದಲ್ಲಿ ಲಿಂಗ ಅನುಪಾತ ಕುಸಿಯುತ್ತಿದ್ದು, ಮಹಿಳೆಯರ ಸಂಖ್ಯೆ ಗಣನೀಯ ಇಳಿಕೆ ಕಾಣುತ್ತಿದೆ. ಪರಿಣಾಮ ರೈತರೂ ಸೇರಿದಂತೆ ಶ್ರಮಿಕ ವರ್ಗಕ್ಕೆ ಮದುವೆಯಾಗಲು ಹೆಣ್ಣಿನ ಕೊರತೆಯಂತಹ ಗಂಭೀರ ಸಮಸ್ಯೆಯೂ ತಲೆದೂರಿದೆ. ದಿಶಾ ಸಭೆಯಲ್ಲಿ ಈ ಕುರಿತಂತೆ ಚರ್ಚೆ ಮಾಡಿದ್ದರೂ, ಇಂಥದ್ದೊಂದು ಘಟನೆ ನಡೆದಿರುವುದು ಅತ್ಯಂತ ನೋವಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯಂತಹ ಪ್ರಕರಣಗಳ ಗಂಭೀರತೆಯ ಕುರಿತಂತೆ ಅರಿವು ಮೂಡಿಸಬೇಕಾದವರೆ, ಹೀನ ಕೃತ್ಯಯಲ್ಲಿ ಭಾಗಿಯಾಗಿದ್ದು ಮತ್ತಷ್ಟು ಆತಂಕ ತಂದಿದೆ. ಈ ಪ್ರಕರಣದ ಹಿಂದಿರುವ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುವೆ ಎಂದು ಸುಮಲತಾ ಆಗ್ರಹಿಸದ್ದಾರೆ.