ಲಾಹೋರ್: ಪ್ರಚಂಡ ವೇಗ ಮತ್ತು ಮಾರಕ ಬೌನ್ಸರ್ಗಳ ಮೂಲಕ ಎದುರಾಳಿ ಬ್ಯಾಟರ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಪಾಕಿಸ್ತಾನದ ಎಡಗೈ ವೇಗದ ಬೌಲರ್ ವಹಾಬ್ ರಿಯಾಝ್, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ ಬುಧವಾರ (ಆಗಸ್ಟ್ 16) ತೆರೆ ಎಳೆದಿದ್ದಾರೆ. 38 ವರ್ಷದ ಅನುಭವಿ ವೇಗದ ಬೌಲರ್ ವಿಶ್ವದ ವಿವಿಧೆಡೆಯಲ್ಲಿ ನಡೆಯಲಿರುವ ಫ್ರಾಂಚೈಸಿ ಕ್ರಿಕೆಟ್ಗಳಲ್ಲಿ ತಮ್ಮ ಆಟ ಮುಂದುವರಿಸಲಿದ್ದಾರೆ.
ಪಾಕಿಸ್ತಾನ ತಂಡದ ಪರ ಈವರೆಗೆ 27 ಟೆಸ್ಟ್, 91 ಏಕದಿನ ಕ್ರಿಕೆಟ್ ಮತ್ತು 36 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳನ್ನು ಆಡಿರುವ ವಹಾಬ್ ರಿಯಾಝ್, ಒಟ್ಟಾರೆ 237 ಅಂತಾರಾಷ್ಟ್ರೀಯ ವಿಕೆಟ್ಗಳನ್ನು ಸಂಪಾದಿಸಿದ್ದಾರೆ. 2020ರ ಡಿಸೆಂಬರ್ನಲ್ಲಿ ಅವರು ಪಾಕಿಸ್ತಾನ ಪರ ಕಟ್ಟ ಕಡೆಯ ಪಂದ್ಯವನ್ನು ಆಡಿದ್ದಾರೆ. ಕಳೆದ ಮಾರ್ಚ್ನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ವಹಾಬ್ ಉತ್ತಮ ಪ್ರದರ್ಶನ ನೀಡಿದ್ದರೂ, ಅವರನ್ನು ಮುಂಬರುವ ಏಷ್ಯಾ ಕಪ್ 2023 ಟೂರ್ನಿಗಾಗಗಲೀ ಅಥವಾ ಅಫಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಒಡಿಐ ಸರಣಿಗಾಗಗಲೀ ಪರಿಗಣಿಸಲಾಗಿರಲಿಲ್ಲ. ಇದರ ಬೆನ್ನಲ್ಲೇ ವಹಾಬ್ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದಾರೆ.