ನವದೆಹಲಿ: ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿಯಾಗಬೇಕು, ಸ್ವಾಮಿನಾಥನ್ ವರದಿ ಜಾರಿಯಾಗಬೇಕು, ರೈತರಿಗೆ ಪಿಂಚಣಿ ಸೌಲಭ್ಯ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ರೈತರು (Farmers) ದೆಹಲಿಯಲ್ಲಿ ಮತ್ತೊಮ್ಮೆ ಐತಿಹಾಸಿಕ ಪ್ರತಿಭಟನೆ ನಡೆಸಲು ತಿರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.13 (ಇಂದು) ʻದೆಹಲಿ ಚಲೋʼಗೆ (Delhi Chalo) ಪಂಜಾಬ್ ಮತ್ತು ಹರಿಯಾಣ ರೈತರು ʻದೆಹಲಿ ಚಲೋʼಗೆ ಕರೆ ನೀಡಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಪಂಜಾಬ್, ಹರಿಯಾಣ, ಉತ್ತರಪ್ರದೇಶದಿಂದಲೂ ರೈತರು ದೆಹಲಿಗೆ ಪ್ರವೇಶಿಸಲಿದ್ದಾರೆ. ಕರ್ನಾಟಕದಿಂದಲೂ ರೈತ ಮುಖಂಡ ಕುರುಬೂರು ಶಾಂತಕುಮಾರ್ ಭಾಗಿಯಾಗಲಿದ್ದಾರೆ. ಈ ರೈತ ಹೋರಾಟದಲ್ಲಿ ಸುಮಾರು 200 ಸಂಘಟನೆಗಳಿಂದ 25,000 ರೈತರು ಪಾಲ್ಗೊಳ್ಳುವ ಸಾಧ್ಯತೆಗಳಿವೆ.
ಅಧಿಕ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವುದರಿಂದ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಪೊಲೀಸರು (Delhi Police) ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಜೊತೆಗೆ ರಾಜಧಾನಿಯಲ್ಲಿ ಎಲ್ಲಾ ರೀತಿಯ ರ‍್ಯಾಲಿ, ಮೆರವಣಿಗೆ, ರಸ್ತೆ ಮಾರ್ಗಗಳನ್ನ ನಿರ್ಬಂಧಿಸಲಾಗಿದೆ. ಟ್ಯಾಕ್ಟರ್‌ಗಳಲ್ಲಿ ಜನರನ್ನು ತುಂಬಿಕೊಂಡು ಹೋಗುವುದಕ್ಕೂ ನಿಷೇಧ ಹೇರಲಾಗಿದೆ. ಮಾರ್ಚ್ 12ರ ವರೆಗೂ ಈ ಕ್ರಮ ಇದೇ ರೀತಿ ಮುಂದುವರಿಯಲಿದೆ. ಸಿಂಘು, ಘಾಜಿಪುರ, ಟಿಕ್ರಿ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರೀ ಭದ್ರತೆ:
ಪ್ರತಿಭಟನೆ ತಡೆಯಲು ಭದ್ರತೆಗೆ 11 ಪ್ಯಾರಾ ಮಿಲಿಟರಿ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ. 5,000ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ. ಇದರೊಂದಿಗೆ ತಂತಿಗಳಿಂದ ಹಾಗೂ ಬ್ಯಾರಿಕೇಡ್‌ಗಳಿಂದ ಗಡಿ ರಸ್ತೆಗಳನ್ನ ಬಂದ್ ಮಾಡಲಾಗಿದೆ.