ಚೆಂಡು ಹೂ ಬೆಳೆದು ಬೆಲೆ ಇಲ್ಲದೇ ರೈತರು ಕಂಗಾಲು

ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿಯಲ್ಲಿ ಸದಾ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆ ಬೆಳೆಯುತ್ತಿದ್ದ ರೈತ ಈ ಬಾರಿ ಚೆಂಡು ಹೂ ಬೆಳೆಯಲು ಮುಂದಾಗಿದ್ದಾರೆ. ಆದರೆ ಚೆಂಡು ಹೂವಿನ ದರ ಕೇಳಿ, ಮುಂದೆ ಚೆಂದದ ಚೆಂಡು ಹೂವನ್ನು ಬೆಳೆಯೋದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಮಾಯಕೊಂಡ ಎಂಬ ಈ ಹೋಬಳಿ ವಿಧಾನಸಭಾ ಕ್ಷೇತ್ರವಾದರೂ ಬಡತನದಿಂದ ಕೂಡಿರುವ ಕ್ಷೇತ್ರ. ಇಲ್ಲಿ ಅತ್ಯಂತ ಹಿಂದುಳಿದವರೇ ಹೆಚ್ಚು. ಇಂತಹದ್ದರ ನಡುವೆ ನೀರಾವರಿ ಕೂಡ ಇಲ್ಲಿ ಇಲ್ಲ. ಕೊಳವೆ ಬಾವಿ ಮೂಲಕವೇ ರೈತರು ಬೆಳೆ ಬೆಳೆಯಬೇಕಾಗಿದ್ದು, ಶ್ರಾವಣ ಮಾಸದ ಹಬ್ಬಗಳನ್ನು ನಂಬಿಕೊಂಡು, ಸಾಕಷ್ಟು ಜನರು ಚೆಂಡು ಹೂ ಬೆಳೆಯಲು ಮುಂದಾದರು. ಅಂತೆಯೇ ಪಿ.ಎಚ್.ನಾಗರಾಜ್ ಎಂಬ ರೈತ ಮುಕ್ಕಾಲು ಎಕರೆಗೆ 50 ಸಾವಿರ ಖರ್ಚು ಮಾಡಿ ಚೆಂಡು ಹೂ ಬೆಳೆದರು. ಬೆಳೆ ಕೂಡ ಚೆನ್ನಾಗಿದೆ. ಗಿಡದ ತುಂಬಾ ಹೂವಿದೆ. ಆದರೆ ಮಾರುಕಟ್ಟೆಯಲ್ಲಿ ಕೆ.ಜಿ ಹೂ.ಗೆ ಆರು ರೂಪಾಯಿ ಇದೆ.

ಒಂದೇ ಸಮಯಕ್ಕೆ ಬೆಳೆ ಬಂತು. ದರ ಕುಸಿತಗೊಂಡಿತು. ಹೂವಿನ ಮಾರುಕಟ್ಟೆಯಲ್ಲಿ ಚೆಂಡು ಹೂವು ಕೆಜಿಗೆ 5 ರೂ., ಸೇವಂತಿ ಹೂ ಕೆಜಿಗೆ 10 ರೂ.ಗೆ ಮಾರಾಟವಾಗುತ್ತಿವೆ. ಹೀಗಾಗಿ ರೈತರು ಹೂ ಬೆಳೆಯಲು ಹಾಕಿದ ಬಂಡವಾಳವಿರಲಿ, ಹೂ ಕೀಳಲು ಕೊಡಬೇಕಾದ ಕೂಲಿಯ ಹಣವೂ ಸಿಗದೇ ಕಂಗಾಲಾಗಿದ್ದಾರೆ. ಕೆಲವು ಬಾರಿ ಹೂ ಕೇಳುವವರಿಲ್ಲದೇ ಹೊಲದಲ್ಲಿಯೇ ಬೀಸಾಡುವ ಪರಿಸ್ಥಿತಿ ಬಂದಿದೆ.

Loading

Leave a Reply

Your email address will not be published. Required fields are marked *