ಬಳ್ಳಾರಿ: ಇಲ್ಲಿಯವರೆಗೂ ಒಬ್ಬ ಜಿಲ್ಲಾ ಮಂತ್ರಿಯೂ ಬರ ವಿಕ್ಷಣೆ ಮಾಡಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರ ವಿರುದ್ದ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ಸೆಪ್ಟೆಂಬರ್ 8 ರಿಂದ ರೈತ ಯುವಮೋರ್ಚಾ ವತಿಯಿಂದ ರಾಜ್ಯಾದ್ಯಂತ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಲಿದ್ದೇವೆ ಎಂದು ತಿಳಿಸಿದರು.
ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಕಗ್ಗತ್ತಲಲ್ಲಿ ಕರ್ನಾಟಕ ಇದೆ. ಬರ ಪೀಡಿತ ತಾಲೂಕಗಳನ್ನು ಘೋಷಣೆ ಮಾಡುತ್ತೇವೆ ಎನ್ನುತ್ತಿದ್ದಾರೆ ಅಷ್ಟೇ. ಇಲ್ಲಿಯವರೆಗೂ ಒಬ್ಬ ಜಿಲ್ಲಾ ಮಂತ್ರಿಯೂ ಬರ ವಿಕ್ಷಣೆ ಮಾಡಿಲ್ಲ, ಅವರ ಘನಂದಾರಿ ಕೆಲಸ ಏನು? ಮನುಷ್ಯ ಸತ್ತಮೇಲೆ ಇವರು ಪರಿಹಾರ ಕೊಡುತ್ತಾರಾ? ಇದೊಂದು ಲಾಟರಿ ಮೇಲೆ ಬಂದ ಸರ್ಕಾರ. ಲಾಟರಿ ಮೇಲೆ ಮುಖ್ಯಮಂತ್ರಿ ಆಗಿದ್ದಾರೆ ಎಂದು ಟೀಕಿಸಿದರು. ನಾವು ಸಣ್ಣ ಹುಡುಗರಿದ್ದಾಗ ಲಾಟರಿ ತೆಗೆದುಕೊಳ್ಳುತ್ತಿದ್ದೆವು. ಒಂದು ರೂಪಾಯಿ 10 ಪೈಸಾ ಕೊಟ್ಟು ಕೊಂಡುಕೊಂಡರೆ ಕೋಟಿ ಕೋಟಿ ಬರುತ್ತದೆ ಎಂದುಕೊಂಡಿದ್ದೆವು. ಅದೇ ಥರ ಈ ಸರ್ಕಾರ ಕೂಡಾ ಲಾಟರಿ ಸರ್ಕಾರ. ಲಾಟರಿ ಸಿಎಂ, ಲಾಟರಿ ಶಾಸಕರು ಎಂದು ಕಿಡಿಕಾರಿದರು