ಬೆಂಗಳೂರು : ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದ್ದಕ್ಕೆ ಮೇಜು ಕುಟ್ಟಿ ಬೆಂಬಲ ವ್ಯಕ್ತಪಡಿಸಿದ್ದ ಶಾಸಕಿ ನಯನಾ ಮೋಟಮ್ಮ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು. ಆದರೆ, ಇದಕ್ಕೆ ಖಾರವಾಗಿಯೇ ಉತ್ತರಿಸಿದ ಶಾಸಕಿ ನಯನಾ ಮೋಟಮ್ಮ, ಟ್ರೋಲರ್ಸ್ಗಳು ಸಮಾಧಾನದಿಂದ ವರ್ತಿಸಿ. ಅವರು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಸ್ವಲ್ಪ ಮಾಹಿತಿ ಕೊರತೆಯಿತ್ತು. ಈಗಲೂ ನಾನು ಅವರ ಮಾತನ್ನು ಬೆಂಬಲಿಸುತ್ತೇನೆ ಎಂದು ಟ್ರೋಲರ್ಸ್ಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ಹೌದು, ಕರ್ನಾಟಕ ವಿಧಾನಸಭಾ ಕಲಾಪದಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ಭಾರಿ ಟ್ರೋಲ್ ಮಾಡುತ್ತಿದ್ದವರಿಗೆ ಶಾಸಕಿ ನಯನಾ ಮೋಟಮ್ಮ ನೀಡಿದ ಪ್ರತಿಕ್ರಿಯೆಗೆ ಕೂಡ ಭಾರಿ ಬೆಂಬಲ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ನಯನಾ ಮೋಟಮ್ಮ ಅವರು, ಸಾವಾಗಿಲ್ಲ ಮಾರ್ರೆ ನಿಜ! ಅಭಿಮಾನಿಗಳು ಟ್ರೋಲ್ ಮಾಡೋ ಮುನ್ನ ಸ್ವಲ್ಪ ಸಮಾಧಾನದಿಂದ ವರ್ತಿಸಬೇಕು. ಪ್ರದೀಪ್ ಈಶ್ವರ್ ಅವರು ಹೇಳಿರೋ ವಿಚಾರದಲ್ಲಿ ಯಾವ ತಪ್ಪು ಇಲ್ಲ. ಮಾಹಿತಿ ಕೊರತೆಯಿದ್ದಿರಬಹುದು ಅಷ್ಟೆ. ಆದರೆ, ಅವರು ಹೇಳಿರುವ ವಿಚಾರ, ಎತ್ತಿರುವ ಪ್ರಶ್ನೆ ಎರಡೂ ಸರಿಯಾಗಿಯೇ ಇದೆ. ಹಾಗಾಗಿಯೇ ನಾನೂ ಸಹ ಅವರ ಮಾತನ್ನು ಬೆಂಬಲಿಸಿದ್ದೇನೆ ಎಂದು ಹೇಳಿದ್ದಾರೆ.
ಟ್ರೋಲಿಗರಿಗೆ ಸಲಹೆ: ತಮ್ಮನ್ನು ಟ್ರೋಲ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿರುವ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಟ್ರೋಲಿಗರಿಗೆ ಸಲಹೆ ನೀಡಿದ್ದಾರೆ. ಸದನದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡುತ್ತಿರುವ ವೇಳೆ ಮೇಜು ಕುಟ್ಟಿ ನಯನಾ ಮೋಟಮ್ಮ ಬೆಂಬಲ ಸೂಚಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ನಯನಾ ಮೋಟಮ್ಮ ಸ್ಪಷ್ಟನೆ ನೀಡಿದ್ದಾರೆ. ಸಾವಾಗಿಲ್ಲ ಮಾರ್ರೆ ಎಂಬ ಹೇಳಿಕೆಯ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.