ಮಂಡ್ಯ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ರಾಡ್ʼನಿಂದ ಹೊಡೆದು ಕೊಲೆ ಮಾಡಿದ್ದಾನೆ. ಮಂಡ್ಯದ ಮಳವಳ್ಳಿ ತಾಲೂಕಿನ ದೇಶುವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಧುಶ್ರೀ (32) ಎಂಬವರನ್ನು ಮಹದೇವ ಎಂಬಾತ ಕೊಂದು ಹಾಕಿದ್ದಾನೆ. ಗಂಡ-ಹೆಂಡತಿ ನಡುವೆ ಆಗಾಗ ಜಗಳ ಸಾಮಾನ್ಯವಾಗಿತ್ತು.
ಆದರೆ, ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಮಂಗಳವಾರ ತಡರಾತ್ರಿ ತಾರಕಕ್ಕೇರಿತ್ತು. ಈ ವೇಳೆ ಸಿಟ್ಟಿಗೆದ್ದ ಮಹದೇವ ರಾಡ್‌ನಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಹೊಡೆತ ತಿಂದ ಹೆಂಡತಿ ಸತ್ತು ಹೋಗಿದ್ದಾಳೆ ಎಂಬುದು ತಿಳಿಯುತ್ತಿದ್ದಂತೆಯೇ ಭಯಗೊಂಡ ಮಹದೇವ ಕೂಡಲೇ ಕಿರುಗಾವಲು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.