ಪ್ರೇಮವೈಫಲ್ಯದಿಂದ ಮನನೊಂದ ಯುವತಿ ನದಿಗೆ ಹಾರಿ ಆತ್ಮಹತ್ಯೆ..!

ಚಿಕ್ಕಬಳ್ಳಾಪುರ: ಪ್ರೇಮವೈಫಲ್ಯದಿಂದ ಮನನೊಂದ ಯುವತಿ ಚಿತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ಧರ್ಮಾವರಂ ನ ನಿಹಾರಿಕಾ (22) ಮೃತ ಯುವತಿ. ಬೆಂಗಳೂರಿನಲ್ಲಿ B-Tech ಓದುತ್ತಿದ್ದ ನಿಹಾರಿಕಾ ಪಿಜಿಯಲ್ಲಿ ವಾಸವಿದ್ದಳು. ಆಂಧ್ರಪ್ರದೇಶದ ತೆನಾಲಿ ಮೂಲದ ಅಜಯ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಕಾರಣಾಂತರಗಳಿಂದ ಇಬ್ಬರ ಮಧ್ಯೆ ವೈಮನಸ್ಯ ಮೂಡಿ ಬ್ರೇಕಪ್ ಮಾಡಿಕೊಂಡಿದ್ದರು ಎನ್ನಲಾಗಿದೆ.

ಇದೇ ತಿಂಗಳ 23 ರಂದು ಕೆಎಸ್ಆರ್‌ಟಿಸಿ ಬಸ್ ಮೂಲಕ ಬೆಂಗಳೂರಿನಿಂದ ಧರ್ಮಾವರಂಗೆ ಬರುತ್ತಿದ್ದ ನಿಹಾರಿಕಾ ಬಸ್ ನಲ್ಲಿ ಬರುವಾಗಲೇ ಪ್ರಿಯಕರನ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಜಗಳ ಮಾಡಿಕೊಂಡಿದ್ದಾಳೆ. ನಂತರ ಈ ವಿಚಾರವನ್ನು ಸ್ನೇಹಿತರು ಹಾಗೂ ತನ್ನ ತಂಗಿಗೆ ಕರೆ ಮಾಡಿ ತಿಳಿಸಿದ್ದಾಳೆ.

ತಂಗಿಯೊಂದಿಗೆ ಮಾತನಾಡಿದ ನಂತರ ಬಸ್ಸಿನಲ್ಲಿ ಬರುತ್ತಿದ್ದ ನಿಹಾರಿಕಾ ಬಾಗೇಪಲ್ಲಿ ಬಳಿ ಚಿತ್ರಾವತಿ ನದಿಯಲ್ಲಿ ನೀರಿರುವುದನ್ನ ಕಂಡಿದ್ದಾಳೆ. ಬಸ್ ನಿಲ್ದಾಣದಲ್ಲಿ ಇಳಿದವಳೇ ಸೀದಾ ಸೇತುವೆ ಮೇಲೆ ಹೋಗಿ ಚಿತ್ರಾವತಿ ನದಿಗೆ ಹಾರಿದ್ದಾಳೆ. ಸಾಯುವುದಕ್ಕೂ ಮುನ್ನ ಆ ಸ್ಥಳದ ಫೋಟೋ ಹಾಗೂ ಲೋಕೇಶನ್ ಶೇರ್ ಮಾಡಿದ್ದಾಳೆ.

ಮಗಳ ಸಾವಿಗೆ ಪ್ರಿಯಕರ ಅಜಯ್ ಕಾರಣ ಅಂತಾ ಮೃತ ನಿಹಾರಿಕಾಳ ಪೋಷಕರು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನದಿಗೆ ಹಾರಿದ ಎರಡು ದಿನಗಳ ನಂತರ ಯುವತಿ ಮೃತದೇಹ ಪತ್ತೆಯಾಗಿದೆ.

Loading

Leave a Reply

Your email address will not be published. Required fields are marked *