ರೇಷನ್ ಕಾರ್ಡ್ ಆಧಾರ್ ನಂಬರ್ ಲಿಂಕ್ ಮಾಡುವ ಕಾರ್ಯಕ್ಕೆ ಜೂನ್ 30 ಎಂದು ಇದ್ದ ಡೆಡ್ಲೈನ್ ಅನ್ನು ಸೆಪ್ಟಂಬರ್ 30ಕ್ಕೆ ವಿಸ್ತರಿಸಲಾಗಿದೆ. ಎಲ್ಲಾ ಪಡಿತರ ಚೀಟಿದಾರರೂ ಆಧಾರ್ಗೆ ಲಿಂಕ್ ಮಾಡಬಹುದು. ಆದರೆ, ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟಂಬ ಪಡಿತರ ಯೋಜನೆಯ ಫಲಾನುಭವಿಗಳು ತಮ್ಮ ರೇಷನ್ ಕಾರ್ಡನ್ನು ಆಧಾರ್ಗೆ ಲಿಂಕ್ ಮಾಡುವುದು ಕಡ್ಡಾಯಪಡಿಸಲಾಗಿದೆ.
ಆಧಾರ್ ನಂಬರ್ಗೆ ಲಿಂಕ್ ಆಗದ ಪಡಿತರ ಚೀಟಿದಾರರಿಗೆ ಈ ಎರಡು ಯೋಜನೆಗಳು ಲಭ್ಯ ಇರುವುದಿಲ್ಲ.
ಈ ಎರಡು ಯೋಜನೆಗಳು ಬಡವರು ಮತ್ತು ನಿರ್ಗತಿಕರಿಗೆಂದು ರೂಪಿಸಲಾಗಿದ್ದು, ಸ್ವಲ್ಪ ಸ್ಥಿತಿವಂತರೂ ಯೋಜನೆಯ ದುರ್ಲಾಭ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದರಿಂದಾಗಿ ಅನರ್ಹ ರೇಷನ್ ಕಾರ್ಡ್ ಅನ್ನು ನೀಗಿಸುವ ದೃಷ್ಟಿಯಿಂದ ಆಧಾರ್ಗೆ ಲಿಂಕ್ ಮಾಡಲಾಗುತ್ತಿದೆ.
ಅಂತ್ಯೋದಯ ಯೋಜನೆ 2002ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಬಡತನ ರೇಖೆಗಿಂತ ಕೆಳಗಿರುವ ಭೂರಹಿತ ಕೃಷಿಕಾರ್ಮಿಕರು, ವಿಧವೆಯರು, ಎಚ್ಐವಿ ಬಾಧಿತರ ಕುಟುಂಬ ಮುಂತಾದವರಿಗೆಂದು ಇದೆ. ಇದರಲ್ಲಿ ಸಬ್ಸಿಡಿ ದರದಲ್ಲಿ ಪ್ರತೀ ಕುಟುಂಬಕ್ಕೂ 35 ಕಿಲೋನಷ್ಟು ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ. ಇನ್ನು, ಆದ್ಯತಾ ಕುಟುಂಬ ಪಡಿತರ ಚೀಟಿ, ಅಥವಾ ಪ್ರಯಾರಿಟಿ ರೇಷನ್ ಕಾರ್ಡ್ ಕೂಡ ಬಿಪಿಎಲ್ ಕುಟುಂಬಗಳಿಗೆ ನೀಡಲಾಗುತ್ತದೆ.
ಆಧಾರ್ ಮತ್ತು ರೇಷನ್ ಕಾರ್ಡ್ ಜೋಡಿಸುವುದು ಹೇಗೆ?
ಸಮೀಪದ ಪಡಿತರ ಕಚೇರಿಗೆ ಹೋಗಿ ಉಚಿತವಾಗಿ ನೀವು ಆಧಾರ್ ನಂಬರ್ ಲಿಂಕ್ ಮಾಡಬಹುದು. ಆನ್ಲೈನ್ನಲ್ಲೂ ಸುಲಭವಾಗಿ ಈ ಕಾರ್ಯ ಮಾಡಬಹುದು.
ಸಮೀಪದ ರೇಷನ್ ಅಂಗಡಿಯಲ್ಲಿ ಮಾಡಿಸುವುದಾದರೆ ನಿಮ್ಮ ರೇಷನ್ ಕಾರ್ಡ್ನಲ್ಲಿರುವ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್ನ ಫೋಟೋ ಕಾಪಿ ತೆಗೆದುಕೊಂಡು ಹೋಗಬೇಕು. ರೇಷನ್ ಕಾರ್ಡ್ ಯಾರ ಹೆಸರಲ್ಲಿದೆಯೋ ಅವರ ಪಾಸ್ಪೋರ್ಟ್ ಗಾತ್ರದ ಫೋಟೋ ತೆಗೆದುಕೊಂಡು ಹೋಗಬೇಕು.
ನಿಮ್ಮ ಬ್ಯಾಂಕ್ ಖಾತೆ ಆಧಾರ್ಗೆ ಲಿಂಕ್ ಆಗಿಲ್ಲದೇ ಇದ್ದರೆ ಬ್ಯಾಂಕ್ ಪಾಸ್ಬುಕ್ನ ಒಂದು ಪ್ರತಿ ಹೊಂದಿರಬೇಕು.
ಈ ಎಲ್ಲಾ ದಾಖಲೆಗಳನ್ನು ಪಡಿತರ ಅಂಗಡಿಯಲ್ಲಿ ಸಲ್ಲಿಸಬೇಕು. ಅಲ್ಲಿ ನಿಮ್ಮ ಆಧಾರ್ ಬಯೋಮೆಟ್ರಿಕ್ ಮಾಹಿತಿ ದೃಢಪಡಿಸಲು ಫಿಂಗರ್ ಪ್ರಿಂಟ್ ಪಡೆಯಲಾಗುತ್ತದೆ.
ಎಲ್ಲಾ ದಾಖಲೆಗಳ ಸಲ್ಲಿಕೆಯಾದ ಬಳಿಕ ಆಧಾರ್ ಜೊತೆ ನೊಂದಾಯಿತವಾದ ನಿಮ್ಮ ಮೊಬೈಲ್ ನಂಬರ್ಗೆ ಎಸ್ಸೆಮ್ಮೆಸ್ ಬರುತ್ತದೆ.
ಯುಐಡಿಎಐನ ವೆಬ್ಸೈಟ್ ಮೂಲಕ ರೇಷನ್ ಕಾರ್ಡ್ ಲಿಂಕ್ ಮಾಡಬಹುದು. ರಾಜ್ಯ ಪಿಡಿಎಸ್ ವೆಬ್ಸೈಟ್ ಮೂಲಕವೂ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡಬಹುದು