ನವದೆಹಲಿ: ಸುಮಾರು 20 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಮೃತಪಟ್ಟಂತೆ ಕತೆ ಸೃಷ್ಟಿಸಿ ಗುರುತು ಮರೆಸಿಕೊಂಡಿದ್ದ ಮಾಜಿ ನೌಕಾ ಸಿಬ್ಬಂದಿಯನ್ನು (Ex Navyman) ಪೊಲೀಸರು ಬಂಧಿಸಿದ್ದಾರೆ. ಆರೋಪಿ ವ್ಯಕ್ತಿಯೊಬ್ಬನನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದ, ಅಲ್ಲದೇ ಟ್ರಕ್ಗೆ ಬೆಂಕಿ ಹಚ್ಚಿ ಇಬ್ಬರನ್ನೂ ಕೊಲೆಗೈದಿದ್ದ. ಇದನ್ನೂ ಅಗ್ನಿ ಅವಘಡ ಎಂಬಂತೆ ಬಿಂಬಿಸಿ, ಇದರಲ್ಲಿ ತಾನೂ ಸಾವನ್ನಪ್ಪಿದಂತೆ ಕತೆ ಹೆಣೆದಿದ್ದ. ಬಳಿಕ ತಲೆ ಮರೆಸಿಕೊಂಡು ನಜಾಫ್ಗಢದಲ್ಲಿ ವಾಸಿಸುತ್ತಿದ್ದ. ಇದೀಗ ತಲೆ ಮರೆಸಿಕೊಂಡಿದ್ದ ಆರೋಪಿ ಬಾಲೇಶ್ ಕುಮಾರ್ನನ್ನು (60) ಪೊಲೀಸರು (Police) ಬಂಧಿಸಿದ್ದಾರೆ.
ಆರೋಪಿ ತನ್ನ ಹೆಸರನ್ನು ಅಮನ್ ಸಿಂಗ್ ಎಂದು ಬದಲಾಯಿಸಿಕೊಂಡಿದ್ದಾನೆ. ಈಗ ರಿಯಲ್ ಎಸ್ಟೇಟ್ ಎಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಅನುಮಾನಗಳು ದೃಢವಾದ ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಪರಾಧ ವಿಭಾಗದ ಹಿರಿಯ ಅಧಿಕಾರಿ ರವೀಂದರ್ ಯಾದವ್ ಹೇಳಿದ್ದಾರೆ. ಆರೋಪಿ 2004 ರಲ್ಲಿ ದೆಹಲಿಯ (New Delhi) ಸಮಯಪುರ ಬದ್ಲಿಯಲ್ಲಿ ಕುಡಿದ ಮತ್ತಿನಲ್ಲಿ ರಾಜೇಶ್ ಎಂಬ ವ್ಯಕ್ತಿಯನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದ. ಅಲ್ಲದೇ ತನ್ನ ಸಹೋದರ ಸುಂದರ್ ಲಾಲ್ ಮೇಲೆ ಹಲ್ಲೆ ನಡೆಸಿದ್ದ. ಮೃತ ರಾಜೇಶ್ ಅವರ ಪತ್ನಿಯ ನಡುವೆ ಅನೈತಿಕ ಸಂಬಂಧದ ಬಗ್ಗೆ ಜಗಳದಿಂದ ಈ ಗಲಾಟೆ ನಡೆದಿತ್ತು.
ನಂತರ ಅಲ್ಲಿಂದ ಪರಾರಿಯಾಗಿದ್ದ ಆರೋಪಿ ಬಿಹಾರ ಮೂಲದ ಇಬ್ಬರು ಕಾರ್ಮಿಕರನ್ನು ಟ್ರಕ್ನಲ್ಲಿ ಕರೆದೊಯ್ದು ಟ್ರಕ್ಗೆ ಬೆಂಕಿ ಹಚ್ಚಿದ್ದ. ಬಳಿಕ ಈ ಅವಘಡದಲ್ಲಿ ಮೃತಪಟ್ಟಿದ್ದಾನೆ ಎಂದು ಎಲ್ಲರನ್ನೂ ನಂಬಿಸಿ ತಲೆ ಮರೆಸಿಕೊಂಡಿದ್ದ. ಇದಾದ ಬಳಿಕ ಆತನ ಪತ್ನಿ ವಿಮೆಯನ್ನೂ ಪಡೆದಿದ್ದಳು. ಅಷ್ಟೇ ಅಲ್ಲದೇ ಪಿಂಚಣಿಯನ್ನು ಪಡೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.ಮೂಲತಃ ಹರಿಯಾಣದವನಾದ (Haryana) ಆರೋಪಿ 8ನೇ ತರಗತಿಯವರೆಗೆ ಓದಿದ್ದು, 1981 ರಲ್ಲಿ ನೌಕಾಪಡೆಗೆ ಸೇರಿ 1996 ರಲ್ಲಿ ನಿವೃತ್ತನಾಗಿದ್ದ.