ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿಕೊಂಡ ಇಂಗ್ಲೆಂಡ್ʼನ ಅತಿ ದೊಡ್ಡ ನಗರ

ಲಂಡನ್: ಇಂಗ್ಲೆಂಡ್ʼನ (England) ಎರಡನೇ ಅತಿ ದೊಡ್ಡ ನಗರ ಬರ್ಮಿಂಗ್ಹ್ಯಾಮ್ (Birmingham) ಆರ್ಥಿಕ ತುರ್ತು ಪರಿಸ್ಥಿತಿ (Financial Emergency) ಘೋಷಿಸಿಕೊಂಡಿದೆ. 1988ರ ಸ್ಥಳೀಯ ಸರ್ಕಾರದ ಹಣಕಾಸು ಕಾಯಿದೆ ಅಡಿಯಲ್ಲಿ ಸೆಕ್ಷನ್ 114 ಸೂಚನೆಯನ್ನು ನೀಡಲಾಗಿದೆ. ಇದು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ವೆಚ್ಚವನ್ನು ನಿರ್ಬಂಧಿಸುತ್ತದೆ.

ಅಲ್ಲಿನ ಸ್ಥಳೀಯ ಆಡಳಿತ ತನ್ನ ಬಜೆಟ್ ಸಮತೋಲನಗೊಳಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದೆ. ಈ ಮೂಲಕ ಸರ್ಕಾರವನ್ನು ದೂಷಿಸಿದೆ. 2010 ರಿಂದ ಸರ್ಕಾರಗಳ ನೀತಿಯಿಂದ ಈ ಸಮಸ್ಯೆ ಎದುರಾಗಿದೆ. ಬಜೆಟ್ನಲ್ಲಿ 1.25 ಶತಕೋಟಿ ಡಾಲರ್ ಕಡಿತಗೊಳಿಸಿರುವುದು ಇಂದಿನ ಸಮಸ್ಯೆಗೆ ಮೂಲ ಕಾರಣ ಎಂದು ಸ್ಥಳೀಯ ಆಡಳಿತ ಹೇಳಿಕೊಂಡಿದೆ.

ಜನರ ಆದಾಯ ಹಾಗೂ ವೆಚ್ಚಗಳಿಗೆ ಸರಿ ಹೊಂದಿಕೆ ಆಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಗತ್ಯ ಸೇವೆಗಳ ವೆಚ್ಚವು ಭಾರೀ ದುಬಾರಿಯಾಗಿದೆ. ಇದು ಆರ್ಥಿಕ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಸರಿಯಾದ ಕ್ರಮವಾಗಿದೆ ಎಂದು ಕಾರ್ಮಿಕ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಅಗತ್ಯ ಸೇವೆಗಳಿಗೆ ಸರ್ಕಾರದ ನಿಧಿ ಕಡಿತದಿಂದ, ಹೆಚ್ಚುತ್ತಿರುವ ಇಂಧನ ದರ ಮತ್ತು ವೇತನ ಬೇಡಿಕೆಗಳು ಸಹ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಇದೇ ರೀತಿಯಾಗಿ ದಕ್ಷಿಣ ಲಂಡನ್ನಲ್ಲಿರುವ ಕ್ರೊಯ್ಡಾನ್ ಕೌನ್ಸಿಲ್ ಸಹ ಕಳೆದ ವರ್ಷ ನವೆಂಬರ್ನಲ್ಲಿ ಹಾಗೂ ಲಂಡನ್ನ ಪೂರ್ವದ ಎಸೆಕ್ಸ್ನಲ್ಲಿರುವ ಥುರಾಕ್ ಕೌನ್ಸಿಲ್ ಡಿಸೆಂಬರ್ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿಕೊಂಡಿದ್ದವು.

Loading

Leave a Reply

Your email address will not be published. Required fields are marked *