ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ಅಪ್ಪಿಕೊಳ್ಳುವುದು ಅಪರಾಧವಲ್ಲ: ಬ್ರಿಜ್ ಭೂಷಣ್

ನವದೆಹಲಿ: ಒಲಿಂಪಿಕ್ಸ್‌ ವಿಜೇತ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯೂಎಫ್‌ಐ) ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ನ್ಯಾಯಾಲಯದಲ್ಲಿ ತಮ್ಮನ್ನ ಸಮರ್ಥಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಯಾವುದೇ ರೀತಿಯ ಲೈಂಗಿಕ ಉದ್ದೇಶವಿಲ್ಲದೇ ಮಹಿಳೆಯನ್ನ ಅಪ್ಪಿಕೊಳ್ಳುವುದು ಅಥವಾ ಸ್ಪರ್ಶಿಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ.

ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ (Delhi Court) ಬಿಜೆಪಿ ಸಂಸದನ ಪರ ಹಾಜರಾದ ವಕೀಲ ರಾಜೀವ್ ಮೋಹನ್, ಮಹಿಳಾ ಕುಸ್ತಿಪಟುಗಳು ಮಾಡಿರುವ ಆರೋಪಗಳು ಕಾಲಮಿತಿಯನ್ನು ಮೀರಿ ಹೋಗಿವೆ. ಕುಸ್ತಿಪಟುಗಳು 5 ವರ್ಷಗಳವರೆಗೂ ಈ ಬಗ್ಗೆ ದೂರು ಸಲ್ಲಿಸಿರಲಿಲ್ಲ. ಏಕೆಂದರೆ ತಮಗೆ ತಮ್ಮ ವೃತ್ತಿ ಜೀವನದ ಬಗ್ಗೆ ಚಿಂತೆ ಇತ್ತು ಅಂತಾ ಹೇಳಿದ್ದಾರೆ. ಆದ್ರೆ ಇದು ಸೂಕ್ತ ವಿವರಣೆ ಅಲ್ಲ. ಅವರ ನಿರೀಕ್ಷಿತ ಯೋಜನೆಗಳು ಈಗ ಬಯಲಾಗುತ್ತಿವೆ ಎಂದು ಭೂಷಣ್ ಪರ ವಕೀಲರು ತಿಳಿಸಿದ್ದಾರೆ.

ಕುಸ್ತಿ ಸ್ಪರ್ಧೆಯಂತಹ ಕಾರ್ಯಕ್ರಮಗಳ ವೇಳೆ ಪುರುಷ ಕೋಚ್‌ಗಳು ಮಹಿಳಾ ಕುಸ್ತಿಪಟುಗಳನ್ನ (Wrestlers) ಅಪ್ಪಿಕೊಳ್ಳುವುದು ತೀರಾ ಸಾಮಾನ್ಯ. ಬಹುತೇಕ ಕೋಚ್‌ಗಳು ಪುರುಷರೇ ಆಗಿರುತ್ತಾರೆ. ಮಹಿಳಾ ಕೋಚ್‌ಗಳು ಇರುವುದು ತೀರಾ ವಿರಳ. ಮಹಿಳಾ ಆಟಗಾರ್ತಿಯರಿಗೆ ಮಹಿಳಾ ಕೋಚ್‌ಗಳೇ ಇರಬೇಕು ಎಂಬ ನಿರ್ಬಂಧ ಕೂಡ ಇಲ್ಲ. ಉತ್ತಮ ಸಾಧನೆಗಾಗಿ ಆಟಗಾರ್ತಿಯನ್ನ ಪುರುಷ ಕೋಚ್ ಅಪ್ಪಿಕೊಂಡರೆ ಅದು ಸಹಜ. ನಾವು ಟಿವಿಗಳಲ್ಲಿ ನೋಡಿದ್ದೇವೆ. ಮಹಿಳಾ ಆಟಗಾರರನ್ನು ಮಹಿಳಾ ಕೋಚ್‌ಗಳು ಮಾತ್ರವೇ ಅಪ್ಪಿಕೊಳ್ಳುವುದಿಲ್ಲ ಎಂದು ವಕೀಲ ರಾಜೀವ್ ಮೋಹನ್ ವಾದ ಮಂಡಿಸಿದ್ದಾರೆ.

ಬ್ರಿಜ್ ಭೂಷಣ್ ಅವರು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂಬ ಆರೋಪಗಳನ್ನ ತಳ್ಳಿಹಾಕಿದ ವಕೀಲರು, ಭೂಷಣ್‌ ಅಪರಾಧ ಮಾಡಿಲ್ಲ. ಮಹಿಳೆಯ ಘನತೆಗೆ ಕುಂದು ಉಂಟುಮಾಡುವಂತಹ ದೌರ್ಜನ್ಯ ಅಥವಾ ಕ್ರಿಮಿನಲ್ ಬಲ ಪ್ರಯೋಗದ ಅಪರಾಧವನ್ನ ಮಂಡಿಸಲು ಅಲ್ಲಿ ದೌರ್ಜನ್ಯ ಅಥವಾ ಕ್ರಿಮಿನಲ್ ಬಲಾತ್ಕಾರ ನಡೆದಿರಬೇಕು. ಆದ್ರೆ ಮುಟ್ಟುವುದು ಖಂಡಿತಾ ಅಪರಾಧ ಬಲ ಪ್ರಯೋಗ ಅಲ್ಲ ಎಂದು ತಿಳಿಸಿದ್ದಾರೆ.

Loading

Leave a Reply

Your email address will not be published. Required fields are marked *