ಮದ್ದೂರು ಬಳಿ ಬೈಪಾಸ್ ರಸ್ತೆಗೆ ಬಿದ್ದ ವಿದ್ಯುತ್ ಕಂಬ: ತಪ್ಪಿದ ಭಾರಿ ಅವಘಡ

ಮಂಡ್ಯ : ಮದ್ದೂರು ಬಳಿಯ ಬೈಪಾಸ್ ರಸ್ತೆಗೆ ದಿಢೀರ್ ವಿದ್ಯುಕ್ ಕಂಬ ಮುರಿದು ಬಿದ್ದಿದೆ. ಆದ್ರೇ ರಸ್ತೆಯಲ್ಲಿ ಆ ವೇಳೆ ವಾಹನಗಳು ಇಲ್ಲದ ಪರಿಣಾಮ, ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾರಿ ಪ್ರಮಾಣದ ಅವಘಡ ತಪ್ಪಿದೆ.

ಬುಧವಾರ ಸಂಜೆ ಬಿರುಗಾಳಿ ಮಳೆಗೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಗ್ರಾಮದ ಬೆಂ – ಮೈ‌ ಬೈಪಾಸ್ ರಸ್ತೆಯಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದು, ವಾಹನ ಸವಾರರು ಬಾರಿ ಪ್ರಮಾಣದ ಅವಘಡದಿಂದ ಪಾರಾಗಿದ್ದಾರೆ.

ವಿದ್ಯುತ್ ಕಂಬ ಹೆದ್ದಾರಿಗೆ ಬಿದ್ದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಿದರು. ತಕ್ಷಣವೇ ಸೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹೆದ್ದಾರಿಯಿಂದ ಕಂಬವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇನ್ನು ವಿದ್ಯುತ್ ಕಂಬದ ಅವಘಡದಿಂದ ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಕೋಡಿಹಳ್ಳಿ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಸರಬರಾಜಗುತ್ತಿದ್ದ ವಿದ್ಯುತ್ ಸಂಪರ್ಕ ಕಡಿತವಾಗಿ ಚುನಾವಣಾ ಪ್ರಕ್ರಿಯೆ ಅರ್ಧ ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡ ಪರಿಣಾಮ ಮತದಾನಕ್ಕೆ ಬಂದಿದ್ದ ಮತದಾರರು ಗಂಟೆ ಗಟ್ಟಲೆ ನಿಂತು ಹಿಡಿ ಶಾಪ ಹಾಕುತ್ತಿದ್ದ ಸನ್ನಿವೇಶಗಳು ಕಂಡು ಬಂದು ರಾತ್ರಿ 8 ಗಂಟೆಯವರೆಗೂ ಮತದಾನ ಪ್ರಕ್ರಿಯೆ ನಡೆಯಿತು.

ಹೆದ್ದಾರಿಯಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳ ಸಹಾಯಕ್ಕೆ ಅಳವಡಿಸಿದ್ದ ಕಬ್ಬಿಣದ ತುಂಡುಗಳನ್ನು ದುಷ್ಕರ್ಮಿಗಳು ಕೆಲ ತಿಂಗಳುಗಳ ಹಿಂದೆ ಕಳವು ಮಾಡಿರುವ ಹಿನ್ನೆಲೆಯಲ್ಲಿ ದುಸ್ಥಿತಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ಸರಿಪಡಿಸುವಂತೆ ಹಲವಾರು ಬಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಾರ್ವಜನಿಕರು ಮತ್ತು ವಾಹನ ಸವಾರರು ಮನವಿ ಮಾಡಿದ್ದರು.

ಆದರೆ, ಪ್ರಾಧಿಕಾರದ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿರುವ ಪರಿಣಾಮ ಕಂಬಗಳು ನೆಲ ಕಚ್ಚುತ್ತಿದ್ದು, ಇನ್ನಾದರೂ ಮಳೆಗಾಲಕ್ಕೂ ಮುನ್ನ ಅಧಿಕಾರಿಗಳು ಎಚ್ಚೆತ್ತು ಕೊಂಡು ಮುಂದಾಗುವ ದೊಡ್ಡ ಅನಾಹುತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Loading

Leave a Reply

Your email address will not be published. Required fields are marked *