ಬಾಳೆಹಣ್ಣು ಪೂಜೆಗೆ ಶ್ರೇಷ್ಠ. ಇದಿಲ್ಲದೆ ಯಾವ ಪೂಜೆಯೂ ಇಲ್ಲ. ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ಬಾಳೆ ಆರೋಗ್ಯದಾಯಕ. ಬಡವ ಬಲ್ಲಿದ ಎನ್ನದೆ ಎಲ್ಲರಿಗೂ ಬೇಕಾದ ಫಲವಾಗಿದೆ.
ಎರಡು ಮೂರು ತಿಂಗಳ ಹಿಂದೆ ಕೆಜಿಗೆ 50-60 ರೂ. ಇದ್ದ ಬಾಳೆ ಬೆಲೆ ಇಂದು 120ರಿಂದ 150 ರೂ.
ವರೆಗೆ ಏರಿಕೆಯಾಗಿದೆ. ವರಮಹಾಲಕ್ಷ್ಮೀ ಹಬ್ಬದ ಆಸುಪಾಸಿನಲ್ಲಿ ಯಾವಾಗಲೂ ಸ್ವಲ್ಪ ಪ್ರಮಾಣದಲ್ಲಿ ಬೆಲೆ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ದುಪ್ಪಟ್ಟಾಗಿದೆ. ಕೆಜಿ ಬಾಳೆಹಣ್ಣು ಕೊಳ್ಳುವವರು ಕಾಲು ಕೆಜಿ ಲೆಕ್ಕಕ್ಕೆ ಬಂದಿದ್ದಾರೆ. ಪ್ರತಿ ವರ್ಷದಂತೆ ಸಾಕಷ್ಟು ಬೆಳೆ ಬರದೇ ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಕಡಿಮೆ ಶ್ರಮದಲ್ಲಿ ಉತ್ತಮ ಆದಾಯದ ಬೆಳೆ ಬೆಳೆಯಲು ರೈತರು ಇತ್ತೀಚೆಗೆ ಒಲವು ತೋರುತ್ತಿದ್ದಾರೆ. ಬಾಳೆ ಬೆಳೆಯಲು ಸ್ವಲ್ಪ ಶ್ರಮ ಪಡಬೇಕಾಗುತ್ತದೆ. ಹಾಗೆಯೆ, ಕಳ್ಳರಿಂದ ಮತ್ತು ಕಾಡು ಪ್ರಾಣಿಗಳಿಂದ ಕಾಪಾಡಿಕೊಳ್ಳುವುದು ಕಷ್ಟಕರವಾಗಿದೆ. ಇಷ್ಟೆಲ್ಲದರ ನಡುವೆಯೂ ಬಾಳೆ ಬೆಳೆದವರ ಬಾಳು ಈಗ ಬೆಲೆ ಏರಿಕೆ ಕಾರಣಕ್ಕೆ ಬಂಗಾರವಾಗುತ್ತಿದೆ.
ಒಂದು ಎಕರೆಗೆ 400 ಬಾಳೆಗಿಡಗಳನ್ನು ನೆಟ್ಟರೆ ಈಗಿನ ಬೆಲೆಯಲ್ಲಿ ಸುಮಾರು 3 ಲಕ್ಷ ರೂ. ಆದಾಯ ಬರುತ್ತದೆ. ಅದೇ ಕೆ.ಜಿ.ಗೆ 20 -30 ರೂ. ಸಿಕ್ಕಿದರೆ ಒಂದು ಲಕ್ಷ ರೂ. ಆದಾಯವಿರುತ್ತದೆ. ಹಾಗಾಗಿ ದೊಡ್ಡ ಆದಾಯ ನಿರೀಕ್ಷಿಸುವ ರೈತರು ಬಾಳೆ ಬೆಳೆಯನ್ನು ನಿರ್ಲಕ್ಷಿಸುತ್ತಾರೆ. ಇತ್ತೀಚೆಗೆ ಬಾಳೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿ ಸರಕಿಗೆ ವ್ಯಾಪಾರಸ್ಥರು ಪರದಾಡುವಂತಾಗಿದೆ. ಬದುಗಳಲ್ಲಿ ಹಾಕಿರುವ ಒಂದೊ ಎರಡೊ ಗೊನೆಗಳನ್ನು ತಂದು ರೈತರು ಮಾರುಕಟ್ಟೆಗೆ ಕೊಡುತ್ತಾರೆ. ವ್ಯಾಪಾರಸ್ಥರು ಅದನ್ನೇ ಮಾರಾಟ ಮಾಡಬೇಕಿದೆ. ಮುಂದೆ ಬರುವ ಗೌರಿ ಹಬ್ಬಕ್ಕೆ ಕೆಜಿ ಬಾಳೆ ಬೆಲೆ 150 ರೂ.ಗೆ ಹೋದರೂ ಅಚ್ಚರಿಪಡುವಂತಿಲ್ಲ